ಮಧ್ಯಪ್ರದೇಶ ಕೈ ನಾಯಕನ ವಿರುದ್ಧ ಜಾಮೀನು ರಹಿತ ವಾರೆಂಟ್!

ಹೈದರಾಬಾದ್: ಮಾನನಷ್ಟ ಹೇಳಿಕೆ ನೀಡಿದ್ದ ಆರೋಪದಡಿ ಮಧ್ಯಪ್ರದೇಶದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಹೈದರಾಬಾದ್ ಕೋರ್ಟ್ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ.

ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ನಾಂಪಲ್ಲಿಯ 8ನೇ ಎಸಿಎಂಎಂ ನ್ಯಾಯಾಲಯವು ದಿಗ್ವಿಜಯ ಸಿಂಗ್ ಅವರಿಗೆ ವಾರೆಂಟ್ ಜಾರಿ ಮಾಡಿದೆ.

ಏನಿದು ಪ್ರಕರಣ?:
ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಣಕ್ಕಾಗಿ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಅವರು 2016ರಲ್ಲಿ ಹೇಳಿಕೆ ನೀಡಿದ್ದರು.

ದಿಗ್ವಿಜಯ್ ಸಿಂಗ್ ಮಾನನಷ್ಟ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅಸಾದುದ್ದೀನ್ ಓವೈಸಿ ಹೈದರಾಬಾದ್‍ನ ಕೋರ್ಟ್ ಮೆಟ್ಟಿಲೇರಿದ್ದರು. ದೂರು ದಾಖಲಿಸಿಕೊಂಡಿದ್ದ ಹೈದರಾಬಾದ್‍ನ ನಾಂಪಲ್ಲಿಯ 8ನೇ ಎಸಿಎಂಎಂ ನ್ಯಾಯಾಲಯವು ವಿಚಾರಣೆ ನಡೆಸಿತ್ತು. ಆದರೆ ದಿಗ್ವಿಜಯ್ ಸಿಂಗ್ ವಿಚಾರಣೆಗೆ ಹಾಜರಾಗದೆ ನಿರಂತರವಾಗಿ ಗೈರು ಉಳಿದಿದ್ದರು. ಇದರಿಂದಾಗಿ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ದಿಗ್ವಿಜಯ್ ಸಿಂಗ್ ಅವರು ಅನೇಕ ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ವಾರೆಂಟ್ ಜಾರಿಯಾಗಿದ್ದು ಇದೇ ಮೊದಲೇನಲ್ಲ. 2017 ಫೆಬ್ರವರಿ 21ರಂದು ಟ್ವೀಟ್ ಮಾಡಿದ್ದ ದಿಗ್ವಿಜಯ್ ಸಿಂಗ್ ಅವರು, ‘ಮದರಸಾ ಹಾಗೂ ಆರ್‌ಎಸ್‌ಎಸ್ ನಡೆಸುತ್ತಿರುವ ಸರಸ್ವತಿ ಶಿಶು ಮಂದಿರ್ ನಲ್ಲಿ ಯಾವುದಾರೂ ವ್ಯತ್ಯಾಸವಿದೆಯೇ? ನನ್ನ ಅಭಿಪ್ರಾಯದ ಪ್ರಕಾರ ಎರಡೂ ದ್ವೇಷವನ್ನೇ ಬಿತ್ತುತ್ತಿವೆ ಎಂದಿದ್ದರು. ಈ ಕುರಿತು ಕಿಡಿಕಾರಿದ್ದ ಆರ್‌ಎಸ್‌ಎಸ್ ಹಾಗೂ ಮದರಸಾ ದಿಗ್ವಿಜಯ್ ಸಿಂಗ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದವು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *