ಕುರ್ತಾದ ಅಳತೆ ನೋಡಿ ವಿದ್ಯಾರ್ಥಿನಿಯರಿಗೆ ಕಾಲೇಜ್ ಒಳಗೆ ಎಂಟ್ರಿ- ವಿಡಿಯೋ ವೈರಲ್

ಹೈದರಾಬಾದ್: ಆಂಧ್ರಪ್ರದೇಶದ ರಾಜಧಾನಿಯಲ್ಲಿ ಪ್ರಸಿದ್ಧ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರ ಡ್ರೆಸ್ ಕೋಡ್ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಲೇಜಿನೊಳಗೆ ವಿದ್ಯಾರ್ಥಿನಿಯರ ಕುರ್ತಾದ ಉದ್ದವನ್ನು ಅಳತೆ ಮಾಡಿ ಬಳಿಕ ಅವರನ್ನು ಒಳಗೆ ಬಿಡುತ್ತಿರುವ ವಿಡಿಯೋ ಸದ್ಯ ಸಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಹೈದ್ರಾಬಾದ್‍ನ ಸೇಂಟ್ ಫ್ರಾನ್ಸಿಸ್ ಕಾಲೇಜಿನಲ್ಲಿರುವ ಈ ವಿಚಿತ್ರ ನಿಯಮ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಹೌದು. ಇಲ್ಲಿ ಕಾಲೇಜಿನೊಳಗೆ ಹೋಗುವ ಮೊದಲು ವಿದ್ಯಾರ್ಥಿನಿಯರ ಕುರ್ತಾದ ಉದ್ದವನ್ನು ಅಳತೆ ಮಾಡಿ, ಅದು ಮೊಣಕಾಲಿಗಿಂತ ಕೆಳಗಿದ್ದರೆ ಮಾತ್ರ ಅವರಿಗೆ ಒಳಗೆ ಪ್ರವೇಶ ನೀಡಲಾಗುತ್ತಿದೆ. ಈ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಕುರ್ತಾ ಅಥವಾ ಚೂಡಿದಾರವನ್ನು ಧರಿಸಿ ವಿದ್ಯಾರ್ಥಿನಿಯರು ಬರಬೇಕು ಎಂದು ಕಡ್ಡಾಯ ನಿಯಮ ಮಾಡಲಾಗಿದೆ.

ಅಷ್ಟೇ ಅಲ್ಲದೆ ವಿದ್ಯಾರ್ಥಿನಿಯರ ಡ್ರೆಸ್ ಕೋಡ್ ಪರೀಕ್ಷಿಸಲು ಕಾಲೇಜಿನಲ್ಲಿ ಸಿಬ್ಬಂದಿಯನ್ನು ಕೂಡ ನೇಮಕ ಮಾಡಲಾಗಿದೆ. ವಿದ್ಯಾರ್ಥಿನಿಯರನ್ನು ಸಾಲಿನಲ್ಲಿ ನಿಲ್ಲಿಸಿ, ಒಬ್ಬರಾದ ಮೇಲೆ ಒಬ್ಬರ ಡ್ರೆಸ್ ಹಾಗೂ ಐಡಿ ಕಾರ್ಡ್ ನೋಡಿ ಮಹಿಳಾ ಸಿಬ್ಬಂದಿ ಕಾಲೇಜಿನ ಒಳಗೆ ಬಿಡುತ್ತಿದ್ದಾರೆ. ಆಗಸ್ಟ್ 1ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಆದರೆ ಈಗ ಕಾಲೇಜಿನ ಈ ನಿಯಮಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿನಿಯರ ಡ್ರೆಸ್ ಅಳತೆ ಮಾಡಿ ಒಳಗೆ ಕಳುಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉದ್ದದ ಕುರ್ತಾ ಧರಿಸಿದವರಿಗೆ ಮಾತ್ರ ಕಾಲೇಜಿನ ಒಳಗೆ ಪ್ರವೇಶಿಸಲು ಅನುಮತಿ ನೀಡಿ, ಮೊಣಕಾಲಿನಿಂದ ಮೇಲೆ ಇರುವ ಕುರ್ತಾ ಧರಿಸಿರುವ ವಿದ್ಯಾರ್ಥಿನಿಯರನ್ನು ತಡೆದು ನಿಲ್ಲಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

https://www.facebook.com/zanobia.tumbi/posts/2663054807072930

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ ವಿರೋಧ ಕಮೆಂಟ್‍ಗಳು ಬರುತ್ತಿದ್ದು, ಕಾಲೇಜಿನ ಕೆಲ ಮಾಜಿ ವಿದ್ಯಾರ್ಥಿಗಳು ಈ ನಿಯಮವನ್ನು ವಿರೋಧಿಸಿದ್ದಾರೆ. ವರ್ಷದ ಮಧ್ಯದಲ್ಲಿ ಹೇಗೆ ಇಂತಹ ನಿಯಮ ಜಾರಿಗೆ ತಂದಿದ್ದು ಯಾಕೆ? ಪ್ರತಿಷ್ಠಿತ ಕಾಲೇಜಿನಲ್ಲಿ ಈ ರೀತಿ ನಿಯಮ ಮಾಡುವುದು ತಪ್ಪು ಎಂದು ಕಮೆಂಟ್ ಮಾಡಿದ್ದಾರೆ. ಕೆಲವರು ಇದು ಒಳ್ಳೆಯ ವಿಚಾರ, ಹೀಗೆ ಉದ್ದದ ಕುರ್ತಾ ಧರಿಸುವುದರಿಂದ ಒಳ್ಳೆಯ ಮದುವೆ ಸಂಬಂಧ ಬರುತ್ತದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಚಿಕ್ಕ ಕುರ್ತಾ ಧರಿಸಿದರೆ ತೊಡೆ ಕಾಣುತ್ತದೆ. ಅದು ಯುವಕರನ್ನು ಆಕರ್ಷಿಸುತ್ತದೆ, ಆದ್ದರಿಂದ ಉದ್ದದ ಕುರ್ತಾ ಧರಿಸುವ ನಿಯಮ ಮಾಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

ಈ ನಿಯಮ ವಿರೋಧಿಸಿ ಇಂದು ಕಾಲೇಜು ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೆ ಈ ರೀತಿ ನಿಯಮದಿಂದ ನಮಗೆ ಹಿಂಸೆ ಆಗುತ್ತಿದೆ. ಪ್ರತಿದಿನ ಕಾಲೇಜಿಗೆ ಬಂದಾಗಲೂ ಹೀಗೆ ಡ್ರೆಸ್ ನೋಡಿ ಒಳಗೆ ಬಿಡುವುದು ಕಿರುಕುಳ ನೀಡುತ್ತಿರುವಂತೆ ಅನಿಸುತ್ತದೆ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *