ಬಲೂನ್ ಊದುವ ವೇಳೆ ಕೆಮಿಕಲ್ ಮಿಶ್ರಿತ ನೀರು ಸೇವನೆ- ಎಚ್.ವೈ.ಮೇಟಿ ಪುತ್ರಿ ಅಸ್ವಸ್ಥ

ಬಾಗಲಕೋಟೆ: ಬಲೂನ್ ಊದುವ ವೇಳೆ ಆಕಸ್ಮಿಕವಾಗಿ ಕೆಮಿಕಲ್ ಮಿಶ್ರಿತ ನೀರು ಸೇವಿಸಿದ ಮಾಜಿ ಸಚಿವ ಎಚ್.ವೈ.ಮೇಟಿ ಪುತ್ರಿ ಹಾಗೂ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ ಅಸ್ವಸ್ಥಗೊಂಡಿರುವ ಘಟನೆ ತಾಲ್ಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚಾಲನೆ ನೀಡಿದ್ದರು. ಬಳಿಕ ಶಾಲಾ ಶಿಕ್ಷರು ಬಲೂನ್ ಊದಲು ಮನವಿ ಮಾಡಿದ್ದು, ಈ ವೇಳೆ ಬಾಯಕ್ಕ ಅವರ ದೇಹದಲ್ಲಿ ಕೆಮಿಕಲ್ ಮಿಶ್ರಿತ ಬಲೂನ್ ನೀರು ಸೇರ್ಪಡೆಯಾಗಿದೆ.

ಕಾರ್ಯಕ್ರಮದ ವೇದಿಕೆಯಲ್ಲೇ ಬಾಯಕ್ಕ ಅವರು ಅಸ್ವಸ್ಥರಾಗಿ ವಾಂತಿ ಮಾಡಿಕೊಂಡರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಶಾಲಾ ಶಿಕ್ಷಕರು ಹಾಗೂ ಇಲಾಖೆಯ ಅಧಿಕಾರಿಗಳು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಸದ್ಯ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಬಾಯಕ್ಕ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬಲೂನ್‍ನಲ್ಲಿದ್ದ ಗ್ಲಿಸರಿನ್ ಹಾಗೂ ಶಾಂಪೂ ಮಿಶ್ರಿತ ನೀರು ಬಾಯಕ್ಕ ಅವರ ದೇಹ ಸೇರಿರುವುದು ಅವರು ಅಸ್ವಸ್ಥರಾಗಲು ಕಾರಣವಾಗಿದ್ದು, ಹೀಗಾಗಿ ವಾಂತಿ ಶುರುವಾಗಿದೆ. ಈಗಾಗಲೇ ಅವರ ದೇಹ ಸೇರಿದ್ದ ಕೆಮಿಕಲ್ ನೀರನ್ನು ಹೊರ ತೆಗೆಯಲಾಗಿದ್ದು, ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಪಿ.ಎ.ಬಿರಾದಾರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *