– 14 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದ ಜೋಡಿ
ಚಂಢೀಗಡ್: ಕೌಟುಂಬಿಕ ಕಲಹದಿಂದ ಪತಿ-ಪತ್ನಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ಹರಿಯಾಣದ ಯಮುನಾನಗರದಲ್ಲಿ ನಡೆದಿದೆ.
ನೀರಜ್(37) ಹಾಗೂ ನಿಶಾ (35) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಬುಧವಾರ ರಾತ್ರಿ ಸುಮಾರು 12 ಗಂಟೆಗೆ ನೀರಜ್ ಹಾಗೂ ನಿಶಾ ನಡುವೆ ಜಗಳ ನಡೆದಿತ್ತು. ಬಳಿಕ ಇಬ್ಬರು ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

14 ವರ್ಷಗಳ ಹಿಂದೆ ನೀರಜ್ ಹಾಗೂ ನಿಶಾ ಪ್ರೀತಿಸಿ ಮದುವೆಯಾಗಿದ್ದರು. ನೀರಜ್ ಫೋಟೋಗ್ರಾಫರ್ ಕೆಲಸ ಮಾಡುತ್ತಿದ್ದನು. ಮದುವೆಯಾದ ಬಳಿಕ ಇಬ್ಬರು ಯಮುನಾನಗರದಲ್ಲಿ ವಾಸಿಸುತ್ತಿದ್ದರು. ಈ ದಂಪತಿಗೆ 8 ಹಾಗೂ 14 ವರ್ಷದ ಪುತ್ರರು ಇದ್ದಾರೆ. ಪೋಷಕರ ಪ್ರಕಾರ ಇಬ್ಬರು ಯಾವಾಗಲೂ ಜಗಳವಾಡುತ್ತಿದ್ದರು.
ಬುಧವಾರ ರಾತ್ರಿ ಕೂಡ ನೀರಜ್ ಹಾಗೂ ನಿಶಾ ನಡುವೆ ಜಗಳವಾಗಿದೆ. ಜಗಳದಿಂದ ಕೋಪಗೊಂಡು ನಿಶಾ ಯಮುನಾನಗರ ರೈಲ್ವೆ ನಿಲ್ದಾಣದ ಹಳಿಗೆ ತಲುಪಿದ್ದಳು. ಆಕೆಯನ್ನು ಸಮಾಧಾನ ಮಾಡಲು ನೀರಜ್ ಹಿಂದೆಯೇ ಹೋದನು. ಬಳಿಕ ಅಲ್ಲಿಯೂ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಅಲ್ಲಿಗೆ ಬಂದ ಫಿರೋಜ್‍ಪುರ-ಧನ್‍ಬಾದ್ ಎಕ್ಸ್ ಪ್ರೆಸ್ ರೈಲಿನ ಎದುರು ಜಿಗಿದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಶಾ ತಂದೆ ಧನಿರಾಮ್, ಇಬ್ಬರ ನಡುವೆ ಯಾವಾಗಲೂ ಜಗಳವಾಗುತ್ತಿತ್ತು. ಹಾಗಾಗಿ ಅವರಿಬ್ಬರು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿರಬಹುದು. ಎಂದು ಹೇಳಿದ್ದಾರೆ. ಬಳಿಕ ಮಾತನಾಡಿದ ಜಿಆರ್‌ಪಿ ಪೊಲೀಸ್ ಅಧಿಕಾರಿ ಧರ್ಮಪಾಲ್, ಈ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅವರ ಪೋಷಕರಿಗೆ ಮೃತದೇಹಗಳನ್ನು ರವಾನಿಸಲಾಗಿದೆ.

Leave a Reply