ವಿಷವಿಕ್ಕಿ, ಪತ್ನಿ-ಮಕ್ಕಳ ತಲೆಗೆ ಬಡಿಗೆಯಿಂದ ಹೊಡೆದು ತಾನೂ ಆತ್ಮಹತ್ಯೆ ಮಾಡ್ಕೊಂಡ

ಉಡುಪಿ: ಮಾನಸಿಕ ಖಿನ್ನತೆಯಿಂದ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷ ಹಾಕಿ ದೇವಸ್ಥಾನದ ಬಾಣಸಿಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜಿಲ್ಲೆಯ ಕುಂದಾಪುರದ ಗೋಳಿಯಂಗಡಿಯ ಈ ಘಟನೆ ನಡೆದಿತ್ತು. ಊರಿಗೆಲ್ಲಾ ಅಡುಗೆ ಮಾಡಿ ಬಡಿಸುತ್ತಿದ್ದ ಬಾಣಸಿಗ ಸೂರ್ಯನಾರಾಯಣ ಭಟ್ ಮನೆಯವರಿಗೆ ವಿಷ ಹಾಕಿ ಕೊಲೆ ಮಾಡಿದ್ದಾರೆ. ಸೂರ್ಯನಾರಾಯಣ ತನ್ನ ಮಡದಿ ಮಾನಸಿ, ಮಕ್ಕಳಾದ ಸುಧೀಂದ್ರ, ಸುಧೀಶ್ ಮೂವರಿಗೂ ವಿಷವಿಕ್ಕಿದ್ದಾನೆ. ನಂತರ ಬಡಿಗೆಯಿಂದ ತಲೆ ಹೊಡೆದು ಮೂವರನ್ನು ಕೊಲೆ ಮಾಡಿದ್ದಾನೆ. ಅವರು ಮೃತಪಟ್ಟ ತಕ್ಷಣ ಸೂರ್ಯನಾರಾಯಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಪತ್ನಿ ಮಕ್ಕಳನ್ನು ಕೊಂದ, ತಾನು ಆತ್ಮಹತ್ಯೆ ಮಾಡ್ಕೊಂಡ

ಈ ಬಗ್ಗೆ ಎಸ್.ಪಿ ನಿಶಾ ಜೇಮ್ಸ್ ಮಾತನಾಡಿ, ಕಳೆದ ಐದು ವರ್ಷದಿಂದ ಕೊಲೆ ಆರೋಪಿಗೆ ಮಾನಸಿಕ ಸಮಸ್ಯೆ ಇತ್ತು ಎಂಬ ಮಾಹಿತಿ ಇದೆ. ಚಿಕಿತ್ಸೆ ಕೂಡ ಪಡೆಯುತ್ತಿದ್ದನು. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಕೌಟುಂಬಿಕ ಕಲಹದ ಬಗ್ಗೆ ಕೆಲ ವರ್ಷಗಳ ಹಿಂದೆ ಪತ್ನಿಯಿಂದ ದೂರು ಬಂದಿತ್ತು ಎಂದರು.

ನವೆಂಬರ್ 26ರ ರಾತ್ರಿ ಘಟನೆ ನಡೆದಿದೆ. ಗೋಳಿಯಂಗಡಿಯ ಸುರ್ಗೋಳಿಯ ನಿರ್ಜನ ಪ್ರದೇಶದಲ್ಲಿ ಮನೆ ಇರುವುದರಿಂದ ಘಟನೆ ಯಾರಿಗೂ ಗಮನಕ್ಕೆ ಬಂದಿಲ್ಲ. ಮಕ್ಕಳು ಬುಧವಾರ ಶಾಲೆಗೆ ಹೊಗದಿರೋದನ್ನು ನೋಡಿ ಸೂರ್ಯನಾರಾಯಣನ ಸಹೋದರನಿಗೆ ಸ್ಥಳೀಯರು ವಿಷಯ ತಿಳಿಸಿದ್ದಾರೆ. ತಮ್ಮನ ಕರೆ ಸ್ವೀಕರಿಸದಿದ್ದಾಗ ಸಂಜೆಯ ವೇಳೆಗೆ ಮನೆ ಹತ್ತಿರ ಬಂದು ನೋಡಿದಾಗ ಊರಿಗೆ ಊರೇ ಬೆಚ್ಚಿಬಿದ್ದಿದೆ. ಒಂದೇ ಕೋಣೆಯೊಳಗೆ ನಾಲ್ಕು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆ, ಮಾನಸಿಕ ಖಿನ್ನತೆಯೇ ಸೂರ್ಯನಾರಾಯಣನಿಂದ ಈ ದುಷ್ಕೃತ್ಯವೆಸಗಲು ಕಾರಣ.

ಈ ಘಟನೆ ಬಗ್ಗೆ ಸ್ಥಳೀಯ ಸಂದೀಪ್ ಮಾತನಾಡಿ, ಸುತ್ತಮುತ್ತಲಿನ ಮನೆಯವರ ಬಳಿ ಇವರು ಕಡಿಮೆ ಸಂಪರ್ಕದಲ್ಲಿ ಇದ್ದರು. ಪತಿ-ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಗಂಡ ಹೆಂಡತಿ ಜಗಳದಲ್ಲೆ ಮಕ್ಕಳು ಬಡವಾದವು ಎಂದು ಹೇಳಿದರು.

ಮೂರು ಜೀವಗಳು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿವೆ. ಶಾಲೆಗೆ ಹೋಗುವ ಮಕ್ಕಳು ಮಾಡಿದ ತಪ್ಪಾದರೂ ಏನು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ದುರ್ಘಟನೆ ನಡೆದ ಸ್ಥಳಕ್ಕೆ ಎಸ್ಪಿ ನಿಶಾ ಜೇಮ್ಸ್ ಭೇಟಿ ನೀಡಿದ್ದಾರೆ. ಪತ್ನಿ ಮಾನಸಿ ಕುಟುಂಬದ ಉಪಸ್ಥಿತಿಯಲ್ಲಿ ಮಹಜರು ಮಾಡಲಾಗಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗುವುದು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *