ಗರ್ಭಿಣಿ ಪತ್ನಿಯನ್ನ ನದಿಗೆ ದೂಡಿ ಕೊಲೆಗೆ ಯತ್ನಿಸಿದ ಪತಿಮಹಾಶಯ!

ಹಾವೇರಿ: ಪತಿ ಮಹಾಶಯನೊಬ್ಬ ತನ್ನ ಗರ್ಭಿಣಿ ಪತ್ನಿಯನ್ನು ನದಿಗೆ ತಳ್ಳಿ ಕೊಲೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಮಹಿಳೆ ಬದುಕುಳಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕು ಚಿಕ್ಕಕಬ್ಬಾರ ಗ್ರಾಮದ ನಿವಾಸಿ ರೂಪೇಶ್ ಗೌಡ ಕೊಲೆ ಮಾಡಲು ಮುಂದಾದ ವ್ಯಕ್ತಿ. ಈತ ಗುರುವಾರ ತಡರಾತ್ರಿ ಉಕ್ಕಡಗಾತ್ರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದಾನೆ.

ಏನಿದು ಪ್ರಕರಣ?:
ಪತ್ನಿ ಕೊಲೆಗೆ ಮೊದಲೇ ಪ್ಲಾನ್ ಮಾಡಿದ್ದ ರೂಪೇಶ್, ಉಕ್ಕಡಗಾತ್ರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಪತ್ನಿಯನ್ನು ಹೊರಗಡೆ ಕರೆದುಕೊಂಡು ಹೋಗಿದ್ದಾನೆ. ಹೀಗೆ ಹೋಗುತ್ತಿದ್ದಾಗ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಿಗುಡಿ ಬಳಿ ಇರುವ ತುಂಗಭದ್ರಾ ನದಿ ಸೇತುವೆ ಮೇಲಿಂದ ಪತ್ನಿಯನ್ನು ತಳ್ಳಿದ್ದಾನೆ. ಈ ಮೂಲಕ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ.

ಆದ್ರೆ ಮಹಿಳೆ ನೀರಿಗೆ ಬಿದ್ದ ತಕ್ಷಣ ಕಲ್ಲುಬಂಡೆ ಹಿಡಿದು ಕುಳಿತು ಜೀವ ಉಳಿಸಿಕೊಂಡಿದ್ದಾರೆ. ಅಲ್ಲದೇ ರಾತ್ರಿಯೆಲ್ಲ ನದಿಯಲ್ಲಿಯೇ ಕಾಲ ಕಳೆದಿದ್ದಾರೆ. ಬಳಿಕ ಬೆಳಗಿನ ಜಾವ ಗ್ರಾಮಸ್ಥರನ್ನ ಕೂಗಿ ಕರೆದು ದಡಕ್ಕೆ ಬಂದಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ರಾಣೆಬೆನ್ನೂರು ತಾಲೂಕಿನ ಪತ್ತೆಪುರ ಗ್ರಾಮಸ್ಥರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ಘಟನೆಯಿಂದ ತೀವ್ರ ಅಸ್ವಸ್ಥವಾಗಿದ್ದ ಮಹಿಳೆಗೆ ರಟ್ಟಿಹಳ್ಳಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದೀಗ ನ್ಯಾಯಕ್ಕಾಗಿ ರಟ್ಟಿಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ, ಪತಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ರಟ್ಟಿಹಳ್ಳಿ ತಾಲೂಕಿನ ಗಲಗಿನಕಟ್ಟಿ ಗ್ರಾಮದ ನಿವಾಸಿಯಾಗಿರೋ ಮಹಿಳೆಗೆ 2017 ರಲ್ಲಿ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಿಯವಾಗಿತ್ತು. ಆದ್ರೆ ಮದುವೆಗೆ ಒಂದು ದಿನ ಇರುವಾಗಲೇ ರೂಪೇಶಗೌಡ ಈಕೆಯನ್ನು ಅಪಹರಣ ಮಾಡಿ ಮದುವೆಯಾಗಿದ್ದನು. ಪ್ರೀತಿಸಿ ಮದುವೆಯಾದ ರೂಪೇಶ್ ಇದೀಗ ಪತ್ನಿಯನ್ನ ನದಿಗೆ ತಳ್ಳಿ ಪರಾರಿಯಾಗಿದ್ದಾನೆ. ಸದ್ಯ ಆರೋಪಿ ರೂಪೇಶಗೌಡನ್ನನ್ನು ಬಂಧಿಸುವಂತೆ ಮಹಿಳೆಯ ಪೋಷಕರುಒತ್ತಾಯ ಮಾಡುತ್ತಿದ್ದಾರೆ.

ಈ ಸಂಬಂಧ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *