ಪತ್ನಿಯನ್ನು ಹೊರಹಾಕಿ ನಿಶ್ಚಿತಾರ್ಥವಾಗಿದ್ದ ಯುವತಿಯನ್ನು ಮದ್ವೆಯಾದ!

ಉಡುಪಿ: ವ್ಯಕ್ತಿಯೊಬ್ಬ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಪತ್ನಿಯನ್ನು ಮನೆಯಿಂದ ಹೊರ ಕಳುಹಿಸಿ ಮರುದಿನವೇ ಬೇರೆಯವರ ಜೊತೆ ನಿಶ್ಚಿತಾರ್ಥ ಆಗಿದ ಯುವತಿಯನ್ನು ವಿವಾಹವಾದ ಘಟನೆ ಉಡುಪಿಯ ಕುಂದಾಪುರದಲ್ಲಿ ನಡೆದಿದೆ.

ಸೈಯ್ಯದ್ ಸಿದ್ಧಿಕ್ ಪತ್ನಿಯನ್ನು ಮನೆಯಿಂದ ಹೊರಕಳುಹಿಸಿದ ಪತಿ. ಶಿವಮೊಗ್ಗ ಜಿಲ್ಲೆ ಭಧ್ರಾವತಿಯ ಸೈಯ್ಯದ್ ಸಿದ್ಧಿಕ್ ಮೂರುವರೆ ವರ್ಷದ ಹಿಂದೆ ಕಾಪು ತಾಲೂಕಿನ ಉಚ್ಚಿಲದ ಸಾಮೂಹಿಕ ವಿವಾಹದಲ್ಲಿ ಕುಂದಾಪುರದ ಹೊಸಂಗಡಿಯ ಮುಬೀನಾ ಎಂಬವರನ್ನು ಮದುವೆಯಾಗಿದ್ದನು. ಈ ದಂಪತಿಗೆ ಈಗ ಒಂದು ಗಂಡು ಮಗು ಕೂಡ ಇದೆ. ಆದರೆ ಇದೀಗ ಇದ್ದಕ್ಕಿದ್ದಂತೆ ಸೈಯ್ಯದ್ ತನ್ನ ಪತ್ನಿ ಮುಬೀನಾಳನ್ನು ಮನೆಯಿಂದ ಹೊರ ಹಾಕಿದ್ದಾನೆ.

ಈ ಬಗ್ಗೆ ಭಧ್ರಾವತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸೈಯ್ಯದ್‍ನನ್ನು ಕರೆಸಿ ಬುದ್ಧಿ ಹೇಳಿದ್ದರು. ಅಲ್ಲಿಂದ ಹೊರ ಬಂದ ಸೈಯ್ಯದ್ ಸಿದ್ಧಿಕ್ ಮರುದಿನವೇ ಪಕ್ಕದ ಮನೆ ಯುವತಿಯನ್ನು ಮದುವೆಯಾಗಿದ್ದಾನೆ.

ಏನಿದು ಘಟನೆ?
ಸೈಯ್ಯದ್ ಭಧ್ರಾವತಿಯ ಹೊಳೆನೇಲ್ಕೆರೆಯ ಪಕ್ಕದ ಮನೆಯ ಹುಡುಗಿ ಸಬೀಹಾ ಬಾನು ಜೊತೆ ಎರಡನೇ ಮದುವೆ ಆಗಿದ್ದಾನೆ. ಸಬೀಹಾಳಿಗೆ ಮುಂದಿನ ತಿಂಗಳು ಬೇರೆ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ಹೀಗಿದ್ದರೂ ಸಹ ಸೈಯ್ಯದ್ ಆಕೆಯನ್ನು ಪುಸಲಾಯಿಸಿ ಮದುವೆಯಾಗಿದ್ದಾನೆ. ಇದಕ್ಕೆ ಸ್ಥಳೀಯ ಮಸೀದಿಯ ಮುಖಂಡರು, ಧರ್ಮದ ಹಿರಿಯರೂ ಬೆಂಬಲವಾಗಿ ನಿಂತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಒಂದೂವರೆ ವರ್ಷದ ಮಗುವನ್ನು ಹಿಡಿದುಕೊಂಡು ಮೊದಲ ಮಡದಿ ಮುಬೀನಾ ನ್ಯಾಯಕ್ಕಾಗಿ ಹೋರಾಟ ಶುರು ಮಾಡಿದ್ದಾರೆ.

ಹೀಗ್ಯಾಕೆ ಮಾಡಿದ್ದೀಯ ಎಂದು ಮುಬೀನಾ ತಂದೆ ತಾಯಿ, ಮಾವ ಸೈಯ್ಯದ್‍ನನ್ನು ಕೇಳಿದರೆ ನಾನು ಇಬ್ಬರನ್ನೂ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಪತಿ ಈ ನಡವಳಿಕೆಯಿಂದ ಬೇಸತ್ತಿರುವ ಮುಬೀನಾ ತವರು ಸೇರಿದ್ದಾರೆ. ಅಮಾಸೆಬೈಲು ಠಾಣೆಯಲ್ಲಿ ದೂರು ನೀಡಿ ನನ್ನ ಗಂಡ ನನಗೆ ಬೇಕು ಎಂದು ಮುಬೀನಾ ಕಣ್ಣೀರು ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *