ಪತಿಯೊಂದಿಗೆ ಅಕ್ರಮ ಸಂಬಂಧ – ಗೆಳತಿಯ ಮನೆಗೆ ನುಗ್ಗಿ ಪತ್ನಿಯಿಂದ ದಾಂಧಲೆ

ಬೆಂಗಳೂರು: ಪತಿಯೊಂದಿಗೆ ಅಕ್ರಮ ಸಂಬಂಧ (Illicit Relationship ) ಹೊಂದಿದ್ದಕ್ಕೆ ಗೆಳತಿಯ ಮನೆಗೆ ನುಗ್ಗಿ ಪತ್ನಿ ಮತ್ತು ಸಂಬಂಧಿಕರು ದಾಂಧಲೆ ನಡೆಸಿದ ಘಟನೆ ಮಾರುತಿ ಲೇಔಟ್ ಬಿಳೇಶಿವಾಲೆ ದೊಡ್ಡಗುಬ್ಬಿ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಪ್ರತಿಮಾ(ಹೆಸರು ಬದಲಾಯಿಸಲಾಗಿದೆ) ಕಳೆದ ಮೂರು ವರ್ಷಗಳ ಹಿಂದೆ ತನಗೆ ಆತ್ಮೀಯರಾಗಿದ್ದ ಶರಣ್ ಎಂಬುವರ ಬಳಿ ಮನೆ (House) ಕಟ್ಟಿಸುವಾಗ ಜಲ್ಲಿ, ಎಂ ಸ್ಯಾಂಡ್, ಬ್ಲಾಕ್ಸ್‌ಗಳನ್ನು ಖರೀದಿ ಮಾಡಿದ್ದಾರೆ. ಖರೀದಿ ಮಾಡುವಾಗ ನಗದು ರೂಪದಲ್ಲಿ ಶರಣ್ ಅವರಿಗೆ ಹಣವನ್ನು ಕೊಟ್ಟಿದ್ದಾರೆ. ನಂತರ ಇವರಿಬ್ಬರ ನಡುವೆ ಉತ್ತಮ ಸಂಬಂಧ ಬೆಳೆದಿದೆ.

ಇವರಿಬ್ಬರ ಮಾತುಕತೆ ನೋಡಿ ಶರಣ್‌ ಪತ್ನಿ ಸಮಂತಾ ನನ್ನ ಗಂಡನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ಯಾ ಎಂದು ಪ್ರಶ್ನಿಸಿ ಪ್ರತಿಮಾ ಜೊತೆ ಗಲಾಟೆ ಮಾಡಿದ್ದರು. ಈ ಗಲಾಟೆಯ ನಂತರ ಶರಣ್‌ ಮತ್ತು ಪ್ರತಿಮಾ ಮಾತನಾಡುವುದನ್ನು ಬಿಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಮಾಲ್‌ ಒಂದರಲ್ಲಿ ಪ್ರತಿಮಾ ಜೊತೆ ಶರಣ್‌ ಇರುವುದನ್ನು ಪತ್ನಿ ಸಮಂತಾ ನೋಡಿದ್ದಾಳೆ.

ಮತ್ತೆ ಸಂಬಂಧ ಉತ್ತಮಗೊಂಡಿರುವುದನ್ನು ನೋಡಿ ಸಮಂತಾ ಫೆ.2ರ ರಾತ್ರಿ 11:30ರ ವೇಳೆಗೆ ಕೆಂಪರಾಜು, ಶರತ್ ಜೊತೆ ಯುವತಿ ಮನೆಗೆ ನುಗ್ಗಿ ದಾಂಧಲೆ ಮಾಡಿ ಗಾಜು, ಪೀಠೋಪಕರಣಗಳನ್ನು ಒಡೆದು ಹಾಕಿದ್ದಾರೆ.

ಈಗ ಪ್ರತಿಮಾ ಗಲಾಟೆಯಿಂದ ನನಗೆ ಲಕ್ಷಾಂತರ ರೂ. ನಷ್ಟವಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೊತ್ತನೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಫ್‌ಐಆರ್‌ ಆಗಿದ್ದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಪ್ರತಿಮಾ ಆರೋಪಿಸಿದ್ದಾರೆ.