ನಗ್ನ ಫೋಟೋ ತಗೆದು ಯೂಟ್ಯೂಬ್ ಹಾಕ್ತೀನಿ: ಪತ್ನಿಗೆ ಬೆಂಗ್ಳೂರು ಪತಿಯಿಂದ ಬೆದರಿಕೆ

ಬೆಂಗಳೂರು: ವರದಕ್ಷಿಣೆಗಾಗಿ ನಗ್ನ ಫೋಟೋ ತೆಗದು ಯೂಟ್ಯೂಬ್‍ಗೆ ಹಾಕುವುದಾಗಿ ಪತಿ ಬೆದರಿಸುತ್ತಿದ್ದಾನೆ ಎಂದು ಆರೋಪಿಸಿ ಪತ್ನಿಯೊಬ್ಬರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕೃಷ್ಣಮೂರ್ತಿ(36) ಪತ್ನಿಗೆ ಬೆದರಿಕೆ ಹಾಕಿದ ಪತಿ. ಕಳೆದ ವರ್ಷ ಏಪ್ರೆಲ್ 30ರಂದು ಮೀನಾ (ಹೆಸರು ಬದಲಾಯಿಸಲಾಗಿದೆ) ಅವರನ್ನು ಕೃಷ್ಣಮೂರ್ತಿ ಮದುವೆಯಾಗಿದ್ದ. ಬಸವನಗುಡಿಯ ಗಾಂಧಿನಗರದಲ್ಲಿ ಮದುವೆಯಾಗಿದ್ದು, ಈಗ ವರದಕ್ಷಿಣೆಗಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೀನಾ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಈ ದೂರಿನ ಆಧಾರದಲ್ಲಿ ಕೃಷ್ಣಮೂರ್ತಿ ಸೇರಿದಂತೆ 8 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 506(ಬೆದರಿಕೆ) 498 ಎ(ಮನೆಯರಿಂದ ಹಿಂಸೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?
ಮದುವೆಯ ಸಂದರ್ಭದಲ್ಲಿ 500 ಗ್ರಾಂ ಚಿನ್ನದ ಒಡವೆ ಹಾಗೂ 5 ಲಕ್ಷ ರೂ. ಹಣವನ್ನು ನೀಡಬೇಕೆಂದು ಕೃಷ್ಣಮೂರ್ತಿ ಕಡೆಯವರು ಬೇಡಿಕೆ ಇಟ್ಟಿದ್ದರು. ಆದರೆ ನಮ್ಮ ಕುಟುಂಬ 350 ಗ್ರಾಂ ತೂಕದ ಚಿನ್ನದ ಒಡವೆಗಳಲ್ಲಿ ಕೃಷ್ಣಮೂರ್ತಿಗೆ 80 ಗ್ರಾಂ ತೂಕದ ಕೊರಳ ಚೈನ್, 7 ಗ್ರಾಂ ತೂಕದ ಉಂಗುರ ಮತ್ತು 40 ಗ್ರಾಂ ತೂಕದ ಕಡ್ಗವನ್ನು ನೀಡಿದ್ದರು. ಇದ್ದಲ್ಲದೇ 4 ಲಕ್ಷ ರೂ. ನೀಡಿ ಮದುವೆ ಮಾಡಿಸಿದ್ದರು. ಆದರೆ ಈಗ ಮತ್ತಷ್ಟು ಹಣವನ್ನು ತರುವಂತೆ ಬೇಡಿಕೆ ಇಟ್ಟಿದ್ದಾನೆ.

ತನ್ನ ಸ್ನೇಹಿತರೊಬ್ಬರ ಬರ್ತಡೇ ಪಾರ್ಟಿ ವೇಳೆ ಕೃಷ್ಣಮೂರ್ತಿ ಬಲವಂತವಾಗಿ ಡ್ರಿಂಕ್ಸ್ ಮಾಡಿಸಿದ್ದ. ಅಲ್ಲದೇ ಅವರು ಹಾಗೂ ಅವರ ಸ್ನೇಹಿತರು ಕುಡಿದು ವಾಂತಿ ಮಾಡಿದ್ದನ್ನು ಕ್ಲೀನ್ ಮಾಡುವಂತೆ ಹಿಂಸೆ ನೀಡುತ್ತಿದ್ದನು. ನಿನ್ನನ್ನು ಮದುವೆಯಾಗುವ ಬದಲು ಬೇರೆಯವರನ್ನು ಮದುವೆಯಾಗಿದ್ದರೆ ಹೆಚ್ಚಿನ ವರದಕ್ಷಿಣೆಯಾಗಿ ಸೈಟ್, ಮನೆ ಹಾಗೂ ಹೆಚ್ಚಿನ ಹಣವನ್ನು ನೀಡುತ್ತಿದ್ದರು ಎಂದು ಹೀಯಾಳಿಸಿ ಈಗ ಮಾತನಾಡುತ್ತಿದ್ದಾನೆ. ಈಗ ವರದಕ್ಷಿಣೆಗಾಗಿ ನನ್ನ ನಗ್ನ ಫೋಟೋಗಳನ್ನು ತೆಗೆದು ಬೆದರಿಸುತ್ತಿದ್ದಾನೆ. ಹೆಚ್ಚಿನ ವರದಕ್ಷಿಣೆಗಾಗಿ 500 ಗ್ರಾಂ ಒಡವೆ ಹಾಗೂ 10 ಲಕ್ಷ ರೂ. ಹಣ ನೀಡಬೇಕೆಂದು ಪತಿಯ ಕಡೆಯವರು ಬಲವಂತ ಮಾಡುತ್ತಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸದೇ ಇದ್ದರೆ ಯೂಟ್ಯೂಬ್‍ನಲ್ಲಿ ನನ್ನ ನಗ್ನ ಫೋಟೋಗಳನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ವರದಕ್ಷಿಣೆ ತರುವಂತೆ ಮನೆಯಿಂದ ಹೊರ ಹಾಕಿದ್ದಾರೆ. ಮನೆ ಹತ್ತಿರ ಹೋದರೆ ಮನೆಗೆ ಸೇರಿಸದೇ ಹೊಡೆದು, ಬೈದು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಆರೋಪಿಸಿ ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *