ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ

ಹುಬ್ಬಳ್ಳಿ: ಅವಳಿ ಜವಳಿ ಹೆಣ್ಣು ಮಕ್ಕಳು ಹುಟ್ಟಿವೆ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಗೆ ಮನಬಂದಂತೆ ಥಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಹಳೇ ಹುಬ್ಬಳ್ಳಿಯ ಇಸ್ಲಾಂಪುರದಲ್ಲಿ ನಡೆದಿದೆ.

ಪತ್ನಿ ಬೇಬಿ ಆಯಿಶಾ ದೌರ್ಜನ್ಯಕ್ಕೆ ಒಳಗಾದ ಪತ್ನಿ. ಆರೋಪಿ ಸಲ್ಮಾನ್ ಅಹ್ಮದ್ ಕಲಬುರ್ಗಿ ಪತ್ನಿ ಅವಳಿ ಜವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಹಲ್ಲೆ ಮಾಡಿದ್ದಾನೆ. ಸದ್ಯಕ್ಕೆ ಪತ್ನಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಏಳು ವರ್ಷಗಳ ಹಿಂದೆ ಸಲ್ಮಾನ್ ಅಹ್ಮದ್ ಕಲಬುರ್ಗಿ ಮತ್ತು ಬೇಬಿ ಆಯಿಶಾ ಇಬ್ಬರ ವಿವಾಹವಾಗಿತ್ತು. ಪತ್ನಿ ಬೇಬಿ ಆಯಿಶಾಗೆ ಮೊದಲ ಹೆರಿಗೆಯಲ್ಲಿ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಹುಟ್ಟಿದೆ. 17 ದಿನಗಳ ಹಿಂದೆ ಎರಡನೇ ಹೆರಿಗೆಯಲ್ಲಿ ಅವಳಿ ಜವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಹೀಗಾಗಿ ತನಗೆ ಮೂರು ಹೆಣ್ಣು ಮಕ್ಕಳಾಗಿವೆ ಎಂದು ಪ್ರತಿನಿತ್ಯ ಕುಡಿದು ಬಂದು ಜಗಳ ಮಾಡುತ್ತಿದ್ದನು.

ಇವರಿಬ್ಬರ ಜಗಳದ ಮಧ್ಯೆ ಸಮುದಾಯದ ಹಿರಿಯರು ಬಂದು ರಾಜಿಸಂಧಾನ ಮಾಡಿದರು. ಆದರೂ ಇಂದು ಪತ್ನಿ ಬೇಬಿ ಆಯಿಶಾ ಮೇಲೆ ಹಲ್ಲೆ ಮಾಡಿದಲ್ಲದೇ ಪೆಟ್ರೊಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಆಗ ಆಯಿಶಾ ಮನೆಯಿಂದ ಹೊರಗಡೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾಳೆ. ಬಳಿಕ ಸ್ಥಳೀಯರು ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಈಗ ಆಯಿಶಾ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಸಂಬಂಧ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *