ಪ್ರೀತಿಸಿ ಮದ್ವೆಯಾದ 3 ತಿಂಗಳಿಗೇ ದಂಪತಿ ಬರ್ಬರ ಹತ್ಯೆ

– ವಿರೋಧ ನಡುವೆಯೂ ಮದುವೆ
– ಮನೆಯ ಹೊರಗಡೆ ಮಲಗಿದ್ದಾಗ ಕೊಲೆ

ಚೆನ್ನೈ: ಪ್ರೀತಿಸಿ ಮದುವೆಯಾಗಿದ್ದ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ. ಇದೊಂದು ಮಾರ್ಯಾದಾ ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸೋಲೈರಾಜ್ (24) ಮತ್ತು ಜ್ಯೋತಿ (24) ಕೊಲೆಯಾದ ದಂಪತಿ. ವಿದ್ಯುತ್ ಇಲ್ಲದ ಹಿನ್ನೆಲೆಯಲ್ಲಿ ಮನೆಯ ಹೊರಗಡೆ ಮಲಗಿದ್ದ ನವ ದಂಪತಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಬುಧವಾರ ಮುಂಜಾನೆ ಈ ಪ್ರಕರಣ ಬೆಳಕಿಗೆ ಬಂದಿದೆ. ದಂಪತಿ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಜ್ಯೋತಿ ಗರ್ಭಿಣಿಯಾಗಿದ್ದಳು ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?
ತಂತೈ ಪೆರಿಯಾರ್ ನಗರ ನಿವಾಸಿ ಸೋಲೈರಾಜ್ ಉಪ್ಪು ತಯಾರಿಸುವ ಕೆಲಸ ಮಾಡುತ್ತಿದ್ದನು. ಈತ ಸಹೋದ್ಯೋಗಿ ಜ್ಯೋತಿಯನ್ನು ಪ್ರೀತಿಸುತ್ತಿದ್ದನು. ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಇಬ್ಬರು ಬೇರೆ ಜಾತಿಯಾಗಿದ್ದರಿಂದ ಜ್ಯೋತಿ ಕುಟುಂಬದವರು ಇವರಿಬ್ಬರ ಮದುವೆಗೆ ನಿರಾಕರಿಸಿದ್ದರು. ಕೊನೆಗೆ ಪೋಷಕರ ವಿರೋಧದ ನಡುವೆಯೂ ಮೂರು ತಿಂಗಳ ಹಿಂದೆ ದಂಪತಿ ಮದುವೆಯಾಗಿದ್ದರು. ಇವರ ವಿವಾಹಕ್ಕೆ ಸೋಲೈರಾಜ್ ಕುಟುಂಬದವರು ಒಪ್ಪಿ ಆಶೀರ್ವಾದಿಸಿದ್ದರು. ನಂತರ ದಂಪತಿ ಪೆರಿಯಾರ್ ನಗರದಲ್ಲಿ ವಾಸಿಸುತ್ತಿದ್ದರು.

ದಂಪತಿಯನ್ನು ಮಂಗಳವಾರ ರಾತ್ರಿಯೇ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಆದರೆ ಬುಧವಾರ ಮುಂಜಾನೆ ಸೋಲೈರಾಜ್ ತಾಯಿ ಮುತ್ತುಮಾರಿ ಬೆಳಗ್ಗೆ 6 ಗಂಟೆಗೆ ಆದರೂ ಇಬ್ಬರೂ ಎದ್ದಿಲ್ಲ ಯಾಕೆ ಎಂದು ನೋಡಲು ಮನೆಗೆ ಬಂದಿದ್ದಾರೆ. ಆಗ ಅವರಿಬ್ಬರ ಶವಗಳು ಪತ್ತೆಯಾಗಿವೆ. ಮುತ್ತುಮಾರಿ ಮನೆಗೆ ಹೋದಾಗ ಅವರಿಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಜ್ಯೋತಿಯ ಕೈಗಳನ್ನು ಕಟ್ ಮಾಡಿದ್ದು, ಇಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಜ್ಯೋತಿ ಗರ್ಭಿಣಿಯಾಗಿದ್ದಳು ಎಂದು ಮುತ್ತುಮಾರಿಯ ಸಹೋದರಿ ಕಾರ್ಪಗಮ್ ಹೇಳಿದ್ದಾರೆ.

ದಂಪತಿ ನಿದ್ದೆ ಮಾಡುವಾಗ ಪುರುಷರ ಗುಂಪೊಂದು ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದೆ. ಇವರಿಬ್ಬರ ಮದುವೆಯಿಂದ ಜ್ಯೋತಿಯ ಪೋಷಕರು ಹಗೆತನ ಹೊಂದಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ತೂತುಕುಡಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅರುಣ್ ಬಾಲಗೋಪಾಲನ್ ಹೇಳಿದ್ದಾರೆ.

ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಯ ತಂದೆ ಅಲಗರ್ ನನ್ನು ಪೊಲೀಸರು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *