ಮನೆ ಸ್ವಚ್ಛಗೊಳಿಸುವಾಗ ಹೊರ ಬಂತು 400ಕ್ಕೂ ಅಧಿಕ ಹಾವುಗಳು!

ಲಕ್ನೋ: ಮನೆಯಲ್ಲಿ ಒಂದು ಹಾವು ಕಂಡರೆ ಸಾಕು ಜನರು ಭಯದಿಂದ ಓಡಾಡಲು ಆರಂಭಿಸುತ್ತಾರೆ. ಸಾಮಾನ್ಯವಾಗಿ ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಹಾವುಗಳು ಕಾಣಿಸಿಕೊಂಡು ಕೆಲಕಾಲ ಭಯದ ವಾತಾವರಣ ಉಂಟಾಗುತ್ತದೆ. ಆದ್ರೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಗ್ರಾಮವೊಂದರ ಮನೆಯಲ್ಲಿ ಸುಮಾರು 400 ಹಾವುಗಳು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ಮೀರತ್‍ನ ಮವಾನಾ ಪಟ್ಟಣದ ಮುನ್ನಾವಾಲಾ ಬಡಾವಣೆಯಲ್ಲಿರುವ ಮನೆಯಲ್ಲಿ ಭಾರೀ ಸಂಖ್ಯೆಯ ಹಾವುಗಳು ಪ್ರತ್ಯಕ್ಷವಾಗಿದೆ. ಮೇ 11ರಂದು ಸಲೀಂ ಎಂಬವರ ಮನೆಯಲ್ಲಿ ಮೊದಲಿಗೆ 2 ಅಡಿ ಉದ್ದದ ಹಾವು ಕಾಣಿಸಿತ್ತು. ಕೂಡಲೇ ಮನೆಯ ಸದಸ್ಯರು ಹಾವನ್ನು ಹೊಡೆದು ಹಾಕಿದ್ರು. ಆದ್ರೆ ಮೇ 11ರ ರಾತ್ರಿ ಮನೆಯೊಳಗೆ ಸುಮಾರು 2 ಅಡಿ ಉದ್ದದ ಹಾವುಗಳು ಕಾಣಿಸತೊಡಗಿವೆ.

ಹಾವುಗಳು ಕಾಣಿಸಿಕೊಳ್ಳುತ್ತಿದ್ದಂತೆ ಭಯಭೀತನಾದ ಸಲೀಂ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರ ಗುಂಪೊಂದು ಮನೆ ಸ್ವಚ್ಛ ಮಾಡಲು ಮುಂದಾದಾಗ ಕೂಡಲೇ ಸುಮಾರು 400 ಹಾವುಗಳು ಕಂಡು ಬಂದಿವೆ. ಚಿಕ್ಕ ಹಾವುಗಳಾಗಿದ್ದರಿಂದ ಗ್ರಾಮಸ್ಥರೆಲ್ಲಾ ಎಲ್ಲವನ್ನು ಕೋಲಿನಿಂದ ಹೊಡೆದು ಸಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವನ್ಯಜೀವಿ ತಜ್ಞರು ಡಾ.ರಾಮ್ ಲಖನ್ ಸಿಂಗ್, ಸಂತಾನೋತ್ಪತ್ತಿ ಕಾಲದಲ್ಲಿ ಹಾವುಗಳು ಸಮೂಹವಾಗಿ ಕಾಣ ಸಿಗುತ್ತವೆ. ಒಂದೇ ಸ್ಥಳದಲ್ಲಿ ಸುಮಾರು 100 ಮರಿಹಾವುಗಳು ಇರುತ್ತವೆ. ಕೆಲವೊಮ್ಮೆ ದೊಡ್ಡ ಹಾವುಗಳು ತಮ್ಮ ಮರಿಹಾವುಗಳನ್ನು ಕೊಲ್ಲುತ್ತವೆ. ಪ್ರಕೃತಿಯ ಈ ನಿಯಮದಿಂದಲೇ ಹಾವುಗಳ ಸಂಖ್ಯೆಯಲ್ಲಿ ಸಮತೋಲನವಿದೆ ಅಂತಾ ತಿಳಿಸಿದ್ದಾರೆ.

ಹಾವುಗಳು ಇರುವ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ವನ್ಯಜೀವಿ ತಜ್ಞೆ ಪ್ರಿಯಾಂಕಾ, ತೇವಾಂಶವಿರುವ ಸ್ಥಳಗಳಲ್ಲಿ ಒಂದೇ ಕಡೆ ಹಾವುಗಳು ಕಂಡು ಬರುತ್ತವೆ. ಸ್ಥಳೀಯರು ಹಾವುಗಳನ್ನು ಸಾಯಿಸಿ ಬಿಸಾಕಿದ್ದರೆ, ಇನ್ನು ಕೆಲವರು ಸತ್ತ ಹಾವುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ನಾಲೆಯಲ್ಲಿ ಬಿಸಾಡಿದ್ದಾರೆ ಅಂತಾ ಸ್ಪಷ್ಟಪಡಿಸಿದ್ದಾರೆ.

ಸಂತಾನೋತ್ಪತ್ತಿ ಕಾಲದಲ್ಲಿ ಹಾವುಗಳು ತಮಗೆ ದಿನನಿತ್ಯ ಆಹಾರ ಸಿಗುವ ಹಸಿರು ಪರಿಸರವನ್ನು ಆಯ್ದುಕೊಳ್ಳುತ್ತವೆ. ಹಾವುಗಳು ಕಂಡು ಬಂದಿರುವ ಸಲೀಂ ಮನೆಯ ಹಿಂದೆ ನಾಲೆ ಹರಿಯುತ್ತಿದೆ. ನಾವು ಹಾವುಗಳನ್ನು ನೋಡಿಲ್ಲ, ಹಾಗಾಗಿ ಯಾವ ಜಾತಿ ಹಾವುಗಳು ಎನ್ನುವುದನ್ನು ಗುರುತಿಸಲಾಗಿಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *