– ಬಿಜೆಪಿಗೆ ನೀವು ಹೆದರಬೇಕಾಗಿಲ್ಲ
– ಅಲ್ಪಸಂಖ್ಯಾತರ ಮನವೊಲಿಸಲು ಬ್ಯಾನರ್ಜಿ ಯತ್ನ
ಕೋಲ್ಕತ್ತಾ: ನಮ್ಮನ್ನ ಹೊಡೆಯುವವರು ಚೂರ್-ಚೂರ್ (ತುಂಡು-ತುಂಡು) ಆಗುತ್ತಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ರಂಜಾನ್ ಹಿನ್ನೆಲೆಯಲ್ಲಿ ಕೋಲ್ಕತ್ತಾದಲ್ಲಿ ನಡೆದ ಸಮಾವೇಶದಲ್ಲಿ ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಅವರು, ನನಗೆ ನಿಮ್ಮ ಆಶೀರ್ವಾದವಿದೆ. ಪವಿತ್ರ ರಂಜಾನ್ ನಿಮಿತ್ತ ಒಂದು ತಿಂಗಳ ಕಾಲ ನೀವು ಉಪವಾಸ ಮಾಡಿದ್ದೀರಿ. ಎಷ್ಟೇ ಕಷ್ಟ ಬಂದರೂ ಧಾರ್ಮಿಕ ನಿಯಮ ಪಾಲಿಸಿದ್ದೀರಿ. ನಿಮಗೆ ಒಳ್ಳೆಯದಾಗಲಿ ಎಂದು ಶುಭಾಶಯ ತಿಳಿಸಿದರು.

ನೀವು ಅವರಿಗೆ ಹೆದರಬೇಕಾದ ಅವಶ್ಯಕತೆ ಇಲ್ಲ. ದುಃಖ, ನೋವಿನಲ್ಲಿ ಕಾಲ ಕಳೆಯಬೇಕಾಗಿಲ್ಲ. ಮುಂದೆ ಬನ್ನಿ, ಅಭಿವೃದ್ಧಿ ಹೊಂದಿ, ನಿಮ್ಮೊಂದಿಗೆ ನಾನು ಇದ್ದೇನೆ ಎಂದು ಮುಸ್ಲಿಂ ಸಮುದಾಯದ ಜನರಿಗೆ ಮಮತಾ ಅಭಯ ನೀಡಿದರು.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು, ಮಮತಾ ಬ್ಯಾನರ್ಜಿ ಅಭಿಮಾನಿಗಳು ನಿನ್ನೆಯಷ್ಟೇ ‘ಜೈ ಹಿಂದ್’, ‘ಜೈ ಬಂಗಾಳ್’ ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂಚೆ ಕಾರ್ಡ್ ಕಳುಹಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಎಂದು ಬರೆದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ 10 ಲಕ್ಷ ಪತ್ರಗಳನ್ನು ಕಳುಹಿಸಿದ್ದರು. ಈ ಬೆನ್ನಲ್ಲೇ ಟಿಎಂಸಿ ಕಾರ್ಯಕರ್ತರು ‘ಜೈ ಹಿಂದ್’, ‘ಜೈ ಬಂಗಾಳ್’ ಹಾಗೂ ‘ವಂದೇ ಮಾತರಂ’ ಎಂದು ಬರೆದು 10 ಸಾವಿರ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.

ಅಂಚೆಪತ್ರ ವಾರ್ ಆರಂಭವಾಗಿದ್ದೇಕೆ?:
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಭಟ್ಪಾರ ಪ್ರದೇಶದಲ್ಲಿ ಕಳೆದ ಗುರುವಾರ ಕಾರಿನಲ್ಲಿ ಮಮತಾ ಹೋಗುತ್ತಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದರು. ತಕ್ಷಣವೇ ಕಾರಿನಿಂದ ಇಳಿದ ಮಮತಾ ಬ್ಯಾನರ್ಜಿ ಅವರು, ನನ್ನನ್ನು ಏನು ಎಂದು ತಿಳಿದುಕೊಂಡಿದ್ದೀರಿ? ಬೇರೆ ರಾಜ್ಯಗಳಿಂದ ಬಂದು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತೀರಾ? ನನ್ನ ವಿರುದ್ಧ ಘೋಷಣೆ ಕೂಗಲು ನಿಮಗೆಷ್ಟು ಧೈರ್ಯ? ನಾನಿದನ್ನು ಸಹಿಸಿಸುವುದಿಲ್ಲ. ನಿಮ್ಮ ಬಗ್ಗೆ ಮಾಹಿತಿಯನ್ನು ಕಲೆಹಾಕಿ, ಕ್ರಮಕೈಗೊಳ್ಳುತ್ತೇನೆ ಎಂದು ಗುಡುಗಿದ್ದರು.
ಪರಿಸ್ಥಿತಿ ಕೈಮಿರುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಮಮತಾ ಬ್ಯಾನರ್ಜಿ ಅವರು ಕಾರಿನಿಂದ ಇಳಿದು ಬಂದು ಅಬ್ಬರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗಿದ್ದ ಬಿಜೆಪಿ, ಜೈ ಶ್ರೀರಾಮ್ ಎಂದು ಬರೆದು ಮಮತಾ ಬ್ಯಾನರ್ಜಿ ಅವರಿಗೆ 10 ಲಕ್ಷ ಅಂಚೆಪತ್ರ ಕಳುಹಿಸಿತ್ತು.

ಬಿಜೆಪಿ ವಿರುದ್ಧ ಕಿಡಿಕಾರಿದ ಮಮತಾ ಬ್ಯಾನರ್ಜಿ ಅವರು ಸೋಮವಾರ ಉತ್ತರ 24 ಪರಗಣ ಜಿಲ್ಲೆಯ ಬಿಜೆಪಿ ಕಚೇರಿ ಬಾಗಿಲು ಮುರಿದು, ಅಲ್ಲಿ ಟಿಎಂಸಿ ಚಿಹ್ನೆ ಬಿಡಿಸಿ ಬಂದಿದ್ದರು.
2014ರ ಲೋಕಸಭಾ ಚುನಾವಣೆ ವೇಳೆ ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ ಕೇವಲ 2 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿತ್ತು. ಆದರೆ ಈ ಬಾರಿ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸಿತ್ತು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೀದಿ ನಾಡಿನಲ್ಲಿ 17 ಬೃಹತ್ ಸಮಾವೇಶ ಕೈಗೊಂಡಿದ್ದರು. ಎಲ್ಲ ಪ್ರಯತ್ನಗಳ ಮೂಲಕ ಬಿಜೆಪಿಯು 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 2014ರಲ್ಲಿ 34 ಕ್ಷೇತ್ರಗಳಲ್ಲಿ ಜಯ ಕಂಡಿದ್ದ ಟಿಎಂಸಿ ಈ ಬಾರಿ 22 ಸ್ಥಾನಕ್ಕೆ ಕುಸಿದಿದೆ.

ಲೋಕಸಭಾ ಚುನಾವಣೆ ಬಳಿಕ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಸರ್ಕಾರ ಬೀಳಿಸಲು ಆಪರೇಷನ್ ಕಮಲ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಟಿಎಂಸಿಯ ಕೆಲ ಶಾಸಕರು ಹಾಗೂ 50 ಜನ ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಚುನಾವಣೆ ನಂತರವೂ ಬಿಜೆಪಿ ಹಾಗೂ ಟಿಎಂಸಿ ಮಧ್ಯೆ ವಾಗ್ದಾಳಿ, ಅಂಚೆಪತ್ರ ಸಮರ ನಡೆಯುತ್ತಲೇ ಇದೆ.

Leave a Reply