ಬಿಡಿಎ ನಿರ್ಲಕ್ಷ್ಯ, ಒಡೆದ ಹುಳಿಮಾವು ಕೆರೆ-ಸಾವಿರಾರು ಮನೆಗಳಿಗೆ ನುಗ್ಗಿದ ನೀರು

ಬೆಂಗಳೂರು: ನಗರ ಹೊರವಲಯದ ಹುಳಿಮಾವು ಕೆರೆ ಒಡೆದು ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಶಾಂತಿನಿಕೇತನ, ಕೃಷ್ಣನಗರ, ಸೇರಿ ಹಲವು ಲೇಔಟ್‍ಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು, ಬೈಕ್‍ಗಳು ನೀರಿನಲ್ಲಿ ಮುಳುಗಿ ಹೋಗಿವೆ. ಬಿಳೇಕಳ್ಳಿ ಬಳಿಯ ನ್ಯಾನೋ ಆಸ್ಪತ್ರೆಗೂ ನೀರು ನುಗ್ಗಿದ್ದು, ರೋಗಿಗಳು ಪರದಾಡುತ್ತಿದ್ದಾರೆ.

140 ಎಕರೆ ವಿಸ್ತೀರ್ಣದಲ್ಲಿರುವ ಹುಳಿಮಾವು ಕೆರೆಯನ್ನು ಬಿಡಿಎ ವತಿಯಿಂದ ಸ್ವಚ್ಛಗೊಳಿಸಲಾಗುತ್ತಿತ್ತು. ಈ ವೇಳೆ ಜೆಸಿಬಿಯಿಂದ ಕೆರೆಯ ಕಟ್ಟೆಗೆ ಡ್ಯಾಮೇಜ್ ಆಗಿದ್ದರಿಂದ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಬಿಬಿಎಂಪಿ ಗಮನಕ್ಕೆ ತರದೇ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.

ಬಿಡಿಎದವರು ನಮ್ಮ ಗಮನಕ್ಕೂ ತರದೇ ಈ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯ ಕಾರ್ಪೊರೇಟರ್ ಭಾಗ್ಯಲಕ್ಷ್ಮಿ ಹೇಳುತ್ತಾರೆ. ಆದರೆ ಮೇಯರ್ ಗೌತಮ್ ಕುಮಾರ್, ಇದು ಕಿಡಿಗೇಡಿಯ ಕೃತ್ಯ ಅಂತ ಆರೋಪಿಸಿದ್ದಾರೆ. ಅಲ್ಲದೇ ಹಾನಿಯಾದ ಮನೆಗಳಿಗೆ ಅಗತ್ಯ ಪರಿಹಾರ ನೀಡುವದಾಗಿ ಭರವಸೆ ನೀಡಿದ್ದಾರೆ.

ಸದ್ಯ ನೀರಿನಲ್ಲಿ ಸಿಲುಕಿದ ಜನರನ್ನ ಬೇರೆಡೆಗೆ ಸ್ಥಳಾಂತರ ಮಾಡಲಾಗಿದ್ದು, ಬಿಬಿಎಂಪಿ ವತಿಯಿಂದ ಊಟ ಹಾಗೂ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಡಿಸಿಪಿ, ಎಸಿಪಿ, ಕೆಎಸ್‍ಆರ್‍ಪಿ, ಎನ್‍ಡಿಆರ್‍ಎಫ್, ಸಿಆರ್ ಪಿಎಫ್‍ನಿಂದ ಕೆರೆ ಒಡೆದು ಹೋದ ಸ್ಥಳದಲ್ಲಿ ಮಣ್ಣು ಹಾಕಿ ಹರಿಯುವ ನೀರನ್ನ ತಡೆಯುವ ಕಾರ್ಯಚರಣೆ ನಡೆಯುತ್ತಿದೆ. ಬಿಡಿಎ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಿದೆ.

Comments

Leave a Reply

Your email address will not be published. Required fields are marked *