ಸಂಚಾರ ನಿಯಮ ಉಲ್ಲಂಘನೆ – ನಿತ್ಯ ಒಂದೂವರೆ ಲಕ್ಷಕ್ಕೂ ಹೆಚ್ಚು ದಂಡ ವಸೂಲಿ

ಹುಬ್ಬಳ್ಳಿ: ಧಾರವಾಡ-ಹುಬ್ಬಳ್ಳಿ ವ್ಯಾಪ್ತಿಯಲ್ಲಿ 2019ನೇ ಸಾಲಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವವರಿಂದ ಪ್ರತಿನಿತ್ಯ ಪೊಲೀಸರು ಒಂದೂವರೆ ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡುತ್ತಿದ್ದಾರೆ.

2019ನೇ ಸಾಲಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 3,21,180 ಜನರ ವಿರುದ್ಧ ಇದೂವರೆಗೂ ದೂರು ದಾಖಲಾಗಿದ್ದು, ಈವರೆಗೆ ಬರೋಬ್ಬರಿ 6,88,28,950 ರೂಪಾಯಿ ದಂಡ ವಸೂಲಿಯಾಗಿದೆ. ಈ ಪೈಕಿ 6,075 ಡ್ರಿಂಕ್ & ಡ್ರೈವ್ ಮಾಡಿದ ಪ್ರಕರಣವಾಗಿದ್ದು, ಈ ಪ್ರಕರಣಗಳಲ್ಲಿ 1,59,21,400 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಹೀಗಾಗಿ ಇದೀಗ ಹುಬ್ಬಳ್ಳಿ ಧಾರವಾಡದಲ್ಲಿ ಪ್ರತಿನಿತ್ಯ ಸರಾಸರಿ 1.89 ಲಕ್ಷ ರೂಪಾಯಿ ದಂಡ ಸಂಗ್ರಹವಾಗುತ್ತಿರುವುದು ವಿಶೇಷವಾಗಿದೆ.

ಕುಡಿದು ವಾಹನ ಓಡಿಸಿದರೆ ಅತಿ ಹೆಚ್ಚು ದಂಡ ವಿಧಿಸಿದರೂ, ಡ್ರಿಂಕ್ & ಡ್ರೈವ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಡಿಸೆಂಬರ್ ಅಂತ್ಯದವರೆಗೆ ಹುಬ್ಬಳ್ಳಿ-ಧಾರವಾಡ ಕಮಿಷನರ್ ವ್ಯಾಪ್ತಿಯಲ್ಲಿ ಕುಡಿದು ವಾಹನ ಚಲಾವಣೆ ಸೇರಿದಂತೆ ವಿವಿಧ ಅಪಘಾತಗಳಲ್ಲಿ ಬರೋಬ್ಬರಿ 80 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕುಡಿದು ವಾಹನ ಚಲಾವಣೆ ಸೇರಿದಂತೆ ಸಂಚಾರಿ ನಿಯಮ ಉಲ್ಲಂಘನೆ ಮಾಡೋ ವಾಹನ ಚಾಲಕರಿಗೆ ಬಿಸಿ ಮುಟ್ಟಿಸಲು ಹುಬ್ಬಳ್ಳಿ- ಧಾರವಾಡ ಪೊಲೀಸರು ಪ್ರತಿನಿತ್ಯ ಶ್ರಮಿಸುತ್ತಿದ್ದಾರೆ. ಅಲ್ಲದೇ ಯಾರ ಒತ್ತಡಕ್ಕೂ ಒಳಗಾಗದೇ ದಂಡ ವಿಧಿಸಿ ಸಂಚಾರ ನಿಯಮ ಪಾಲನೆ ಮಾಡುವಂತೆ ಪೊಲೀಸರು ಚಾಲಕರಿಗೆ ಮನವರಿಕೆ ಮಾಡುತ್ತಿರುವುದು ವಿಶೇಷವಾಗಿದೆ.

Comments

Leave a Reply

Your email address will not be published. Required fields are marked *