ಮದುವೆಯಾಗುವುದಾಗಿ ನಂಬಿಸಿ 19 ಲಕ್ಷ ರೂ. ದೋಚಿದ ವರ

ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ವಧುವಿನ ಪೋಷಕರಿಂದ 19 ಲಕ್ಷ ರೂ. ದೋಚಿ, ವಂಚಿಸಿದ್ದ ವರನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ ನಿವಾಸಿಯೊಬ್ಬರು ತಮ್ಮ ಮಗಳಿಗೆ ವರ ಹುಡುಕಲು 2016ರಲ್ಲಿ ಮಾಸಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದರು. ಜಾಹೀರಾತಿನಲ್ಲಿ ಮಗಳ ಮಾಹಿತಿ ಹಾಗೂ ಮೊಬೈಲ್ ನಂಬರ್ ಸಹ ನೀಡಿದ್ದರು. ಇದನ್ನು ಪಡೆದ ಆರೋಪಿ ವಧುವಿನ ಮನೆಯವರಿಂದ ಬರೋಬ್ಬರಿ 19 ಲಕ್ಷ ರೂ. ಪಡೆದು ವಂಚಿಸಿದ್ದಾನೆ.

ಜಾಹೀರಾತು ನೋಡಿ ವಧುವಿನ ತಂದೆಯನ್ನ ಸಂಪರ್ಕಿಸಿದ್ದ ವರ ತಾನೂ ಕೆಪಿಟಿಸಿಎಲ್ ಗುಂಡ್ಲುಪೇಟೆಯಲ್ಲಿ ಎಇಇ ಎಂದು ಪರಿಚಯ ಮಾಡಿಕೊಂಡಿದ್ದ. ನಂತರ ಮೈಸೂರು ಮೂಲದ ಆರೋಪಿ ಪುಟ್ಟಯ್ಯ ಅಲಿಯಾಸ ರಮೇಶ್ ಸಿದ್ದಮಾಧು ತನಗೆ ಶೀಘ್ರದಲ್ಲೇ ಪ್ರಮೋಷನ್ ಆಗಲಿದೆ. ಗುಂಡ್ಲುಪೇಟೆಯಿಂದ ಹುಣಸೂರಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಮೇಲಾಧಿಕಾರಿಗಳಿಗೆ ಹಣ ನೀಡಬೇಕು ಎಂದು ಹುಡುಗಿಯ ಮನೆಯವರನ್ನ ನಂಬಿಸಿದ್ದ. ಅಲ್ಲದೇ 2016ರಿಂದ 2018ರವರೆಗೆ ಬ್ಯಾಂಕ್ ಖಾತೆ ಮೂಲಕ ಬರೋಬ್ಬರಿ 19 ಲಕ್ಷ ರೂಪಾಯಿ ಹಣವನ್ನ ಪಡೆದಿದ್ದ.

ಹಣವನ್ನ ಮರಳಿ ನೀಡದೇ ಮಗಳನ್ನ ಮದುವೆಯಾಗದೇ ವಂಚಿಸಿದ್ದ ಆರೋಪಿ ವಿರುದ್ಧ ಹುಡುಗಿಯ ಮನೆಯವರು ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ, 19 ಲಕ್ಷ ರೂ. ಜಪ್ತಿ ಮಾಡಿದ್ದಾರೆ.

ಆರೋಪಿಯನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದ ಸಹಾಯಕ ಪೊಲೀಸ್ ಆಯುಕ್ತ ಎಂ.ವಿ.ಮಲ್ಲಾಪುರ ಹಾಗೂ ಹಳೇ ಹುಬ್ಬಳ್ಳಿ ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಆಯುಕ್ತ ಆರ್.ದಿಲೀಪ್ ಅಭಿನಂದನೆ ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *