ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಿ: ಹೆಚ್‌.ಆರ್‌ ರಂಗನಾಥ್‌

ಬೆಂಗಳೂರು: ನಮ್ಮ ಕಾಲದಲ್ಲಿ ಈ ರೀತಿಯ ಸೌಲಭ್ಯಗಳು ಇರಲಿಲ್ಲ. ಆದರೆ ಇಂದು ಎಲ್ಲವೂ ಬದಲಾಗಿದೆ. ಹೀಗಾಗಿ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಿ ಎಂದು ಪೋಷಕರಿಗೆ ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌. ಆರ್‌ ರಂಗನಾಥ್‌ (H R Ranganath) ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ  (PUBLiC TV Vidhyapeeta) ಚಾಲನೆ ಕೊಟ್ಟು ಬಳಿಕ ಮಾತನಾಡಿದ ಅವರು, ನಿನ್ನೆಯಷ್ಟೇ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಮತ ಹಾಕಲು ಬನ್ನಿ ಎಂದು ಎಷ್ಟು ಗಂಭೀರವಾಗಿ ಕರೆಯುತ್ತಿವೆಯೋ ಅದಕ್ಕಿಂತ ಹೆಚ್ಚು ಗಂಭೀರವಾಗಿ ಮಕ್ಕಳ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಪಿಯುಸಿ, ಪದವಿ ನಂತರ ಮಕ್ಕಳು ಮುಂದಿನ ವಿದ್ಯಾಭ್ಯಾಸಕ್ಕೆ ಯಾವ ಕಾಲೇಜು ಹಾಗೂ ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಹೀಗಾಗಿ ಈ ಬಾರಿ ಕೂಡ ಮಕ್ಕಳ ಪೋಷಕರು ತಮ್ಮ ಮಕ್ಕಳು ಯಾವ ಕಾಲೇಜು ಹಾಗೂ ಯಾವ ಕೋರ್ಸ್‌ ಮಾಡಬೇಕು ಎಂಬುದನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆಂದು ಹೆಚ್‌ಆರ್‌ಆರ್‌ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳ ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ ಚಾಲನೆ

ಈ ಬಾರಿಯ ಶೈಕ್ಷಣಿಕ ಮೇಳದಲ್ಲಿ 110 ಸಂಸ್ಥೆಗಳು ಇವೆ. ಈ 110 ಸಂಸ್ಥೆಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಅದರಲ್ಲಿ ಯಾವುದು ಬೇಕು ಎಂಬುದನ್ನು ಆರಿಸಿಕೊಳ್ಳುವುದಕ್ಕೆ ಇದೊಂದು ವೇದಿಕೆ. ನಮಗೆಲ್ಲ ಈ ಸೌಲಭ್ಯಗಳು ಇರಲಿಲ್ಲ. ನಾವು SSLC, PUC ಪಾಸ್‌ ಆದರೆ 10 ಕಾಲೇಜಿಗೆ ಅರ್ಜಿ ಹಾಕಬೇಕಿತ್ತು. ಯಾವ ಕಾಲೇಜಿನಲ್ಲಿ ಸೀಟು ಸಿಗುತ್ತೆ ಅಂತಾನೂ ಗೊತ್ತಿರಲಿಲ್ಲ. ಹೀಗಾಗಿ ನಾವು ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ಅಲೆದಾಡಬೇಕಾಗಿತ್ತು. ಅಪ್ಲಿಕೇಷನ್‌ ತೆಗೆದುಕೊಳ್ಳೋಕೆ ಹಾಗೂ ಕೊಡುವುದಕ್ಕೆ ಮೂರು ಮೂರು ದಿನ ಓಡಾಡುತ್ತಿದ್ದೆವು. ಇಷ್ಟು ಮಾತ್ರವಲ್ಲದೇ ಅದರಲ್ಲಿ ಜಾತಿ ಪ್ರಮಾಣ ಪತ್ರ ಅಂಥದ್ದೇನಾದರೂ ಮಿಸ್ಸಿಂಗ್ ಆದ್ರೆ ಅದಕ್ಕೂ ಎರಡೆರಡು ದಿನ ಓಡಾಡುತ್ತಿದ್ವಿ.‌ ಇನ್ನು ತಹಶೀಲ್ದಾರ್‌ ಕಚೇರಿಗೆ ಹೋದ್ರಂತೂ 4 ದಿನ ಬೇಕೇ ಬೇಕು ಎಂಬುದಾಗಿ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡರು.

ಸದ್ಯ ಇವತ್ತು ಎಲ್ಲವೂ ಬದಲಾಗಿದೆ. ಅದಕ್ಕೆ ಒಂದು ಒಳ್ಳೆಯ ಅವಕಾಶ ಇಲ್ಲಿದೆ. ದೇವರು ಒಳ್ಳೆಯ ಅವಕಾಶ ಗಳನ್ನು ನೀಡುತ್ತಿದ್ದಾನೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಾದವರು ನಾವಾಗಿರುತ್ತೇವೆ. ಹೀಗಾಗಿ ಒಳ್ಳೊಳ್ಳೆಯ ಸಂಸ್ಥೆಗಳಿವೆ. ನಿಮ್ಮ ಮಗುವಿಗೆ ಒಳ್ಳೆಯ ಕಾಲೇಜು ಹಾಗೂ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವಂತೆ ಹಚ್‌ಆರ್‌ ಆರ್‌ ಪೋಷಕರಿಗೆ ಕಿವಿಮಾತು ಹೇಳಿದರು.

110ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗಿ: ಕರ್ನಾಟಕದ (Karnataka) ಅತಿ ದೊಡ್ಡ ಶೈಕ್ಷಣಿಕ ಮೇಳ ವಿದ್ಯಾಪೀಠದಲ್ಲಿ ರಾಜ್ಯದ ನಾನಾ ಭಾಗಗಳ 110ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್‌ ಮತ್ತು ಕಾಮೆಡ್‌ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

ಅನಿಮೇಷನ್, ಮೀಡಿಯಾ ಮತ್ತು ಗೇಮಿಂಗ್ ಆರ್ಕಿಟೆಕ್ಚರ್, ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳು, ವಾಣಿಜ್ಯ ಮತ್ತು ಬ್ಯಾಂಕಿಂಗ್, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು, ಫ್ಯಾಷನ್ ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್, ಕಾನೂನು ವಿಶ್ವವಿದ್ಯಾಲಯಗಳು, ಸಮೂಹ ಸಂವಹನ, ಎಂಬಿಎ ಸಂಸ್ಥೆಗಳು ವಿದ್ಯಾಪೀಠದಲ್ಲಿ ಭಾಗಿಯಾಗಿವೆ.

ಮತದಾನ ಮಾಡಿ, ಉಡುಗೊರೆ ಪಡೆಯಿರಿ: ಶೈಕ್ಷಣಿಕ ಮೇಳದಲ್ಲಿ ಸೆಮಿನಾರ್‌ ಸೇರಿದಂತೆ ಹಲವು ಕಾರ್ಯಕ್ರಮಗಳು ಇರಲಿವೆ. ಲಕ್ಕಿ ಡ್ರಾ ಮೂಲಕ ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಅದರಲ್ಲೂ ವಿಶೇಷವಾಗಿ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾವಣೆ ಮಾಡಿದ ವಿದ್ಯಾರ್ಥಿಗಳಿಗೆ ಆಕರ್ಷಕ ಉಡುಗೊರೆ ಸಿಗಲಿದೆ.

ಚಿನ್ನದ ನಾಣ್ಯ, ಸೈಕಲ್‌ ಉಡುಗೊರೆ: ವಿವಿಧ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಚಿನ್ನದ ನಾಣ್ಯ ಹಾಗೂ ಬೈಸಿಕಲ್‌ ಸೇರಿದಂತೆ ವಿಶೇಷ ಉಡುಗೊರೆ ನೀಡಲಾಗುವುದು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅಂಕಪಟ್ಟಿಯ ಫೋಟೋಕಾಪಿ ತಂದು ತೋರಿಸಿದ್ದಲ್ಲಿ ಅವರಿಗೂ ಉಡುಗೊರೆ ಸಿಗಲಿದೆ.