ಸಿದ್ದು ರಾಜೀನಾಮೆಗೆ ಮುನ್ನವೇ ಹುಲಿಯಾ ಬಿಜೆಪಿ ಸೇರಿ ‘ರಾಜಾಹುಲಿಯಾ’ ಅಂತಿದ್ದ!

ಚಿಕ್ಕೋಡಿ: ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗುತ್ತಿದೆ. ಬಿಜೆಪಿ ಗೆಲುವಿನ ನಾಗಾಲೋಟಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ರೆ ಸಿದ್ದರಾಮಯ್ಯ ಅವರ ರಾಜೀನಾಮೆಗೂ ಮುನ್ನವೇ ಹುಲಿಯಾ ಖ್ಯಾತಿಯ ಪೀರಪ್ಪ ಕಟ್ಟಿಮನಿ ಬಿಜೆಪಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ.

ಕಾಗವಾಡ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಜಯಭೇರಿ ಹಿನ್ನೆಲೆಯಲ್ಲಿ ಹೌದು ಹುಲಿಯಾ ಜೊತೆಗೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. ಕಾಗವಾಡ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಒತ್ತಾಯದ ಮೇರೆಗೆ ಸಂಭ್ರಮಾಚರಣೆಯಲ್ಲಿ ಭಾಗಿಯಾದ ಪೀರಪ್ಪ ಕೂಡ ಬಿಜೆಪಿ ಮುಖಂಡರಿಗೆ ಹುಲಿ ಹುಲಿ ಎಂದು ಕರೆದು ಖುಷಿ ಪಟ್ಟಿದ್ದಾನೆ.

ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಹೌದು ಹುಲಿಯಾ ಖ್ಯಾತಿಯ ಪೀರಪ್ಪ ಕಟ್ಟಿಮನಿ ಬಿಜೆಪಿ ಶಾಲು ಧರಿಸಿ, ತಲೆಗೆ ಬಿಜೆಪಿಯ ಕಮಲದ ಟೋಪಿ ಇಟ್ಟುಕೊಂಡು ಗುಲಾಲ ಎರಚಿ ಬಿಜೆಪಿ ಕಾರ್ಯಕರ್ತರ ಜೊತೆಗೆ ಸಂಭ್ರಮಿಸಿದ್ದಾನೆ.

ಕಾಗವಾಡ ಕ್ಷೇತ್ರದಲ್ಲಿ ನಡೆದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣ ಮಾಡುವಾಗ ಇದೇ ಪೀರಪ್ಪ ‘ಹೌದೋ ಹುಲಿಯಾ’ ಎಂದಿದ್ದರು. ಬಳಿಕ ಈ ಡೈಲಾಗ್ ಸಾಮಾಜಿಕ ಜಾಲತಾಣ, ಟಿಕ್ ಟ್ಯಾಕ್ ನಲ್ಲಿ ಫುಲ್ ವೈರಲ್ ಆಗಿತ್ತು. ರಾತ್ರೋರಾತ್ರಿ ಪೀರಪ್ಪ ರಾಜ್ಯದ ಗಮನ ಸೆಳೆದಿದ್ದರು.

ನಾನು ಸಿದ್ದರಾಮಯ್ಯ ಕಟ್ಟಾ ಅಭಿಮಾನಿ ಎಂದಿದ್ದ ಹುಲಿಯಾ ಸೋಮವಾರ ಬಿಜೆಪಿಯವರ ಜೊತೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಹುಲಿಯಾ ಎಂದು ಖ್ಯಾತಿಯಾಗಿದ್ದ ಪೀರಪ್ಪ ಕಟ್ಟಿಮನಿ ಅವರನ್ನ ಬಿಜೆಪಿ ಕಾರ್ಯಕರ್ತರು ಆಪರೇಶನ್ ಕಮಲ ನಡೆಸಿ ಬಿಜೆಪಿಗೆ ಸೆಳೆದಿದ್ದಾರೆ ಎಂಬ ನಗೆ ಚಟಾಕಿಗಳು ಈಗ ಕಾಗವಾಡ ಕ್ಷೇತ್ರದಲ್ಲಿ ಜೋರಾಗಿವೆ. ಜೊತೆಗೆ ಹೌದೋ ಹುಲಿಯಾನ ‘ರಾಜಾ ಹುಲಿಯಾ’ ಡೈಲಾಗ್ ಮತ್ತೆ ವೈರಲ್ ಆಗುತ್ತಿದೆ.

Comments

Leave a Reply

Your email address will not be published. Required fields are marked *