ಭಾರತದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪದ್ಮಶ್ರೀ, ಪದ್ಮ ವಿಭೂಷಣ, ಶೌರ್ಯ ಪ್ರಶಸ್ತಿ, ಭಾರತ ರತ್ನದಂತಹ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ ಅಂತ ನಮಗೆಲ್ಲರಿಗೂ ಗೊತ್ತೇ ಇದೆ. ಹಾಗೆಯೇ ಫಿಲಿಫೈನ್ಸ್ (Philippines) ದೇಶ ನೀಡುವ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯ (Ramon Magsaysay Award) ಬಗ್ಗೆ ನಿಮ್ಗೆ ಗೊತ್ತಾ? ಈ ಪಶಸ್ತಿಯು ನೊಬೆಲ್ ಪ್ರಶಸ್ತಿಗೆ ಸಮಾನಾದ ಪ್ರಶಸ್ತಿ ಅಂತಾನೇ ಹೇಳಲಾಗುತ್ತದೆ. ಹಾಗದರೆ ಇನ್ನಷ್ಟು ಈ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯ ಬಗ್ಗೆ ತಿಳಿದುಕೊಳ್ಳಬೇಕಂದ್ರೆ ಮುಂದೆ ಓದಿ..

ಹೌದು, ಈ ಪ್ರಶಸ್ತಿಯನ್ನು ನೊಬೆಲ್ ಪ್ರಶಸ್ತಿಗೆ ಸಮಾನವಾದ ಪ್ರಶಸ್ತಿ ಎನ್ನುತ್ತಾರೆ. ಮೊದಲ ಬಾರಿಗೆ ಭಾರತದ ಸಂಸ್ಥೆಯೊಂದು ಈ ಪ್ರಶಸ್ತಿಯನ್ನು ತನ್ನ ಮುಡುಗೇರಿಸಿಕೊಂಡಿದೆ. ಭಾರತದ ‘Educate Girls’ ಸಂಸ್ಥೆಯು ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಇದರೊಂದಿಗೆ ಪ್ರತಿಷ್ಠಿತ ಗೌರವ ಪಡೆದ ಭಾರತದ ಮೊದಲ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿದೆ.
ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯು ಏಷ್ಯಾದ ಜನರಿಗೆ ಅಸಾಧಾರಣ ಧೈರ್ಯ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಿ ಗೌರವಿಸುತ್ತದೆ. ಶಾಲೆಯಿಂದ ಹೊರಗುಳಿದಿರುವ ಹಳ್ಳಿಗಾಡಿನ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ‘Educate Girls’ ಸಂಸ್ಥೆಗೆ ಈ ಗೌರವ ದೊರೆತಿದೆ.

ರಾಜಸ್ಥಾನದ ಕುಗ್ರಾಮವೊಂದರಲ್ಲಿ ಬಾಲಕಿಯೊಬ್ಬಳ ಶಿಕ್ಷಣಕ್ಕಾಗಿ ಆರಂಭಗೊಂಡಿದ್ದ Educate Girls ಎಂಬ ಸಂಸ್ಥೆಯು, ಕಾಲ ಕಳೆದಂತೆ ಹೆಮ್ಮರವಾಗಿ ಬೆಳೆದು, ಸಾವಿರಾರು ಶಿಕ್ಷಣ ವಂಚಿತ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಅವರೆಲ್ಲರೂ ಸ್ವಾವಲಂಬಿಗಳಾಗಿ ಬದುಕಲು ಸಂಸ್ಥೆ ಶ್ರಮಿಸುತ್ತಿದೆ.
Educate Girls ಸಂಸ್ಥೆ ಯಾವಾಗ ಪ್ರಾರಂಭವಾಯಿತು?
ಎಜುಕೇಟ್ ಗರ್ಲ್ಸ್ ಸಂಸ್ಥೆಯನ್ನು 2007ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಪದವೀಧರೆ ಸಫೀನಾ ಹುಸೇನ್ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಕಟ್ಟುವ ಸಂದರ್ಭದಲ್ಲಿ ಅವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೆಲಸ ಮಾಡುತ್ತಿದ್ದರು. ಮಹಿಳಾ ಅನಕ್ಷರತೆಯ ಸವಾಲುಗಳನ್ನು ಪರಿಹರಿಸಲೆಂದೇ ಅವರು ಭಾರತಕ್ಕೆ ಮರಳಿ, Educate Girls ಸಂಸ್ಥೆಯನ್ನು ಸ್ಥಾಪಿಸಿದರು.

ಎಜುಕೇಟ್ ಗರ್ಲ್ಸ್ ಸಂಸ್ಥೆಯು ಹೆಣ್ಣು ಮಕ್ಕಳನ್ನು ಅನಕ್ಷರತೆಯಿಂದ ಮುಕ್ತಗೊಳಿ, ತಮ್ಮ ಕಾಲ ಮೇಲೆ ತಾವು ನಿಲ್ಲಲು ಸಹಾಯ ಮಾಡುತ್ತದೆ. ಈ ಸಂಸ್ಥೆಯ ನಿಸ್ವಾರ್ಥ ಸೇವೆಯನ್ನು ಗುರುತಿಸಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಫೌಂಡೇಶನ್ (RMAF) ಈ ಪ್ರಶಸ್ತಿಯನ್ನು ನೀಡಿದೆ. ಅಲ್ಲದೇ ಮಾಲ್ಡೀವ್ಸ್‌ನ ಶಾಹಿನಾ ಅಲಿ ಮತ್ತು ಫ್ಲೇವಿಯಾನೊ ಆಂಟೋನಿಯೊ ಎಲ್ ವಿಲ್ಲಾನುಯೆವಾ ಎಂಬ ಇಬ್ಬರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಮ್ಯಾಗ್ಸೆಸೆ ಪ್ರಶಸ್ತಿ ಎಂದರೇನು?
1958 ರಲ್ಲಿ ಪ್ರಾರಂಭವಾದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಏಷ್ಯಾದ ನೊಬೆಲ್ ಪ್ರಶಸ್ತಿಗೆ ಸಮಾನವೆಂದು ಪರಿಗಣಿಸಲಾಗಿದೆ. ಈ ಪ್ರಶಸ್ತಿಯನ್ನು ಯುನೈಟೆಡ್ ಸ್ಟೇಟ್ಸ್‌ನ ಶ್ರೀಮಂತ ರಾಕ್‌ಫೆಲ್ಲರ್ ಕುಟುಂಬ ಮತ್ತು ಫಿಲಿಪೈನ್ ಸರ್ಕಾರವು ರಚಿಸಿದ ರಾಕ್‌ಫೆಲ್ಲರ್ ಬ್ರದರ್ಸ್ ಫಂಡ್‌ನ ಟ್ರಸ್ಟಿಗಳು ಸ್ಥಾಪಿಸಿವೆ.
ಪ್ರತಿ ವರ್ಷ ಆಗಸ್ಟ್ 31 ರಂದು, ಫಿಲಿಪೈನ್ಸ್‌ನ ಮಾಜಿ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಅವರ ಜನ್ಮ ವಾರ್ಷಿಕೋತ್ಸವದಂದು ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ವಿಜೇತರಿಗೆ ಪ್ರಮಾಣಪತ್ರ ಮತ್ತು ರಾಮನ್ ಮ್ಯಾಗ್ಸೆಸೆ ಅವರ ಚಿತ್ರವಿರುವ ಪದಕವನ್ನು ನೀಡಲಾಗುತ್ತದೆ. ಅದೇ ವರ್ಷದ ಪ್ರತಿ ನವೆಂಬರ್‌ನಲ್ಲಿ ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆಯುವ ಔಪಚಾರಿಕ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ರಾಮನ್ ಮ್ಯಾಗ್ಸೆಸೆ ಯಾರು?
ರಾಮನ್ ಡೆಲ್ ಫಿಯೆರೊ ಮ್ಯಾಗ್ಸೆಸೆ ಫಿಲಿಪೈನ್ಸ್‌ನ ಏಳನೇ ಅಧ್ಯಕ್ಷರಾಗಿದ್ದರು. ಅವರು ಆಗಸ್ಟ್ 31, 1907 ರಂದು ಜನಿಸಿದರು. ಅವರ ತಂದೆ ಕಮ್ಮಾರರಾಗಿದ್ದರು, ತಾಯಿ ಶಿಕ್ಷಕಿಯಾಗಿದ್ದರು. ಮ್ಯಾಗ್ಸೆಸೆ ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಆಟೋಮೊಬೈಲ್ ಮೆಕ್ಯಾನಿಕ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಬಳಿಕ ಮ್ಯಾಗ್ಸೆಸೆ ಅವರನ್ನು ಮಿಲಿಟರಿ ಗವರ್ನರ್ ಆಗಿ ನೇಮಕಗೊಂಡರು. 1946 ರಲ್ಲಿ, ಅವರು ಲಿಬರಲ್ ಪಕ್ಷದ ಅಡಿಯಲ್ಲಿ ಫಿಲಿಪೈನ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆಯಾದರು. ಅಲ್ಲಿ ಅವರು 1950 ರಲ್ಲಿ ರಾಷ್ಟ್ರೀಯ ರಕ್ಷಣಾ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು ಎರಡು ಅವಧಿಗೆ ಕಾಂಗ್ರೆಸ್ಸಿಗರಾಗಿ ಸೇವೆ ಸಲ್ಲಿಸಿದರು.
1953 ಡಿಸೆಂಬರ್ 30ರಂದು, ಅವರು ಫಿಲಿಪೈನ್ಸ್‌ನ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷರಾದ ಸ್ವಲ್ಪ ಸಮಯದ ನಂತರ, ಅವರು 1957 ರಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು.
ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಭಾರತೀಯರು ಯಾರೆಲ್ಲ?
ಮದರ್ ತೆರೇಸಾ (1962), ಜಯಪ್ರಕಾಶ್ ನಾರಾಯಣ್ (1965), ಚಲನಚಿತ್ರ ನಿರ್ಮಾಪಕ ಸತ್ಯಜಿತ್ ರೇ (1967), ಪತ್ರಕರ್ತ ಅರುಣ್ ಶೌರಿ (1982), IPS ಅಧಿಕಾರಿ ಕಿರಣ್ ಬೇಡಿ (1994), ಅರುಣಾ ರಾಯ್ (2000), ಅರವಿಂದ್ ಕೇಜ್ರಿವಾಲ್ (2006), ಸೋನಮ್ ವಾಂಗ್ಚುಕ್ (2018) ಮತ್ತು ಪತ್ರಕರ್ತ ರವೀಶ್ ಕುಮಾರ್ (2019)ಅವರಿಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ದೊರೆತಿದೆ.
