ಪಾಕ್‌ ವಶದಲ್ಲಿದ್ದ ‘ಸಿಂಗಂ’ ವಿಂಗ್‌ ಕಮಾಂಡರ್‌ ತಾಯ್ನಾಡಿಗೆ ವಾಪಸ್‌ – ಭಾರತದ ಗೆಲುವಿಗೆ 5ರ ಸಂಭ್ರಮ

ದು 2019, ಮಾರ್ಚ್‌ 1 ರ ದಿನ. ಪಾಕಿಸ್ತಾನ (Pakistan) ಸೆರೆ ಹಿಡಿದಿದ್ದ ಭಾರತ ಮಾತೆಯ ವೀರಪುತ್ರನೊಬ್ಬ ಸುರಕ್ಷಿತವಾಗಿ ವಾಪಸ್ ಆಗಲೆಂದು ಕಾದಿದ್ದ ಕೋಟ್ಯಂತರ ಭಾರತೀಯರ ಕನಸು ನನಸಾದ ದಿನ. ಯೋಧ ಅಟ್ಟಾರಿ-ವಾಘಾ ಗಡಿಯಲ್ಲಿ ಕಾಲಿಟ್ಟಾಗ ಭಾರತೀಯರ ಕಣ್ಣಲ್ಲಿ ಆನಂದಭಾಷ್ಪ, ‘ಭಾರತ್‌ ಮಾತಾ ಕೀ ಜೈ’ ಜಯಘೋಷ. ದೇಶದ ಜನರಿಗೆ ಅದು ಸಂಭ್ರಮದ ಕ್ಷಣವಾಗಿತ್ತು. ದೇಶಕ್ಕೆ ದೇಶವೇ ತುದಿಗಾಲಲ್ಲಿ ಕಾದಿದ್ದ ಆ ಹೆಮ್ಮೆಯ ಪುತ್ರ ಬೇರಾರು ಅಲ್ಲ. ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್.‌

ಭಾರತದ ವಾಯುವಲಯ ಪ್ರವೇಶಿಸಿದ್ದ ಪಾಕಿಸ್ತಾನದ ಯುದ್ಧ ವಿಮಾನವನ್ನು ಭಾರತದ ಮಿಗ್‌ 21 ಯುದ್ಧ ವಿಮಾನ ಹೊಡೆದುರುಳಿಸಿತ್ತು. 2019 ರ ಫೆ.27 ರಂದು ಅಭಿನಂದನ್‌ ವರ್ಧಮಾನ್‌ (Abhinandan Varthaman) ಪಾಕಿಸ್ತಾನದ ಜೆಟ್‌ ಅನ್ನು ಹೊಡೆದುರುಳಿಸಿದ್ದರು. ಈ ವೇಳೆ ಅವರು ಪಾಕ್‌ ಸೇನೆಯಿಂದ ಸೆರೆಯಾಗಿದ್ದರು. ಪರಿಣಾಮವಾಗಿ ಎರಡು ದೇಶಗಳ ನಡುವೆ ಯುದ್ಧದ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಕೊನೆಗೂ ಭಾರತ ತನ್ನ ವಿಂಗ್‌ ಕಮಾಂಡರ್‌ನನ್ನು ಸುರಕ್ಷಿತವಾಗಿ ವಾಪಸ್‌ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಭಾರತದ ಆ ರಾಜತಾಂತ್ರಿಕ ಗೆಲುವಿಗೆ ಇಂದಿಗೆ 5 ವರ್ಷ.

ಪುಲ್ವಾಮ ದಾಳಿ ಕರಾಳತೆ!
2019 ರ ಫೆಬ್ರವರಿ 14 ರಂದು ಕಾಶ್ಮೀರದ ಪುಲ್ವಾಮದಲ್ಲಿ (Pulwama Attack) ಸಿಆರ್‌ಪಿಎಫ್‌ ಯೋಧರ ವಾಹನವೊಂದರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಅದರಲ್ಲಿದ್ದ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ದುರಂತಕ್ಕೆ ಇಡೀ ದೇಶ ಮರುಗಿತ್ತು. ಪುಲ್ವಾಮ ದಾಳಿಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಭಾರತದ ಇತಿಹಾಸದಲ್ಲಿ ಪುಲ್ವಾಮ ದುರಂತ ಕರಾಳ ದಿನವಾಗಿ ಉಳಿದಿದೆ.

ಭಾರತದಿಂದ ಪ್ರತಿ ದಾಳಿ
ಪುಲ್ವಾಮ ದಾಳಿಗೆ ಪ್ರತಿ ದಾಳಿಯಾಗಿ ಭಾರತ, ಪಾಕ್‌ ಆಕ್ರಮಿತ ಕಾಶ್ಮೀರದ ಭಾಗವಾದ ಬಾಲಾಕೋಟ್‌ನಲ್ಲಿದ್ದ ಉಗ್ರರ ತರಬೇತಿ ಶಿಬಿರದ ಮೇಲೆ ವಾಯುಸೇನೆ ಬಾಂಬ್‌ ದಾಳಿ ನಡೆಸಿತು. ಅಲ್ಲಿನ ತರಬೇತಿ ಕೇಂದ್ರ ಮತ್ತು ಅದರೊಳಗಿದ್ದ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.

ಪಾಕ್‌ ಸೇನೆಗೆ ಸಿಕ್ಕಿಬಿದ್ದ ವರ್ಧಮಾನ್
ಬಾಲಾಕೋಟ್‌ ಮೇಲೆ ಏರ್‌ಸ್ಟ್ರೈಕ್‌ (Balakot Airstrikes) ಮಾಡಿದ್ದಕ್ಕೆ ಪ್ರತಿಯಾಗಿ ಪಾಕ್‌ ಸೇನೆ ಫೆ.27 ರಂದು ಭಾರತದ ಮೇಲೆ ವಾಯು ದಾಳಿ ನಡೆಸುವ ಪ್ರಯತ್ನ ನಡೆಸಿತ್ತು. ಭಾರತದ ವಾಯುವಲಯ ಪ್ರವೇಶಿಸಿದ ಪಾಕಿಸ್ತಾನದ ಯುದ್ಧ ವಿಮಾನವನ್ನು ಭಾರತದ ಮಿಗ್‌ 21 ಯುದ್ಧ ವಿಮಾನ ಹೊಡೆದುರುಳಿಸಿತ್ತು. ಈ ಕಾರ್ಯಾಚರಣೆಯಲ್ಲಿ ಭಾರತದ ಮಿಗ್‌ 21 ಯುದ್ಧ ವಿಮಾನವೊಂದು ಪತನಗೊಂಡಿತ್ತು. ಅದರ ಪೈಲಟ್‌ ಕಾಣೆಯಾಗಿದ್ದರು. ಅವರೇ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್.‌ ಆಗ ಪೈಲಟ್‌ ನಮ್ಮ ವಶದಲ್ಲಿದ್ದಾನೆ ಎಂದು ಪಾಕಿಸ್ತಾನ ಹೇಳಿತ್ತು. ಪಾಕ್‌ ಸೇನೆ ವರ್ಧಮಾನ್‌ನನ್ನು ಒತ್ತೆಯಾಳಾಗಿ ಇರಿಸಿತ್ತು.

ವರ್ಧಮಾನ್‌ ಬಂಧನ ಹೇಗಾಯ್ತು?
2019 ರ ಫೆಬ್ರವರಿ 27 ರಂದು ಅಭಿನಂದನ್‌ ವರ್ಧಮಾನ್‌ ಅವರು ಡಾಗ್‌ಫೈಟ್‌ ಮಾಡಿ ಪಾಕಿಸ್ತಾನದ ಎಫ್‌16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಈ ಡಾಗ್‌ ಫೈಟ್‌ ವೇಳೆ ಪಾಕಿಸ್ತಾನದ ಯುದ್ಧ ವಿಮಾನ ಹಾರಿಸಿದ ಕ್ಷಿಪಣಿ ಅಭಿನಂದನ್‌ ಇದ್ದ ಮಿಗ್‌ 21 ವಿಮಾನಕ್ಕೆ ಬಡಿಯಿತು. ಪರಿಣಾಮ ಮಿಗ್‌ 21 ಯುದ್ಧ ವಿಮಾನ ಪತನವಾಗಿ ವರ್ಧಮಾನ್‌ ಪಾಕಿಸ್ತಾನದ ಭೂಪ್ರದೇಶದಲ್ಲಿ ಪ್ಯಾರಾಚೂಟ್‌ ಸಹಾಯದಿಂದ ಇಳಿದಿದ್ದರು. ಅವರನ್ನು ತಕ್ಷಣ ಪಾಕ್‌ ಸೇನೆ ಬಂಧಿಸಿ ಒತ್ತೆಯಾಳಾಗಿ ಇರಿಸಿಕೊಂಡಿತ್ತು.

ವರ್ಧಮಾನ್‌ಗೆ ನೀಡಿದ್ದ ಚಿತ್ರಹಿಂಸೆಯ ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದಕ್ಕೆ ಭಾರತದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಭಾರತದ ವಿಂಗ್‌ ಕಮಾಂಡರ್‌ನನ್ನು ಸುರಕ್ಷಿತವಾಗಿ ಕರೆತರುವಂತೆ ಹೋರಾಟಗಳು ನಡೆದವು. ಕೋಟ್ಯಂತರ ಜನರು ಭಾರತೀಯ ಯೋಧನಿಗಾಗಿ ಪ್ರಾರ್ಥಿಸಿದರು. ಸರ್ಕಾರಕ್ಕೆ ಒತ್ತಡ ಶುರುವಾಯಿತು. ಈ ಬೆಳವಣಿಗೆ ಉಭಯ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ಸೃಷ್ಟಿಸಿತ್ತು. ಅನೇಕ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತಿದ್ದವು.

ಮೋದಿ ಜೊತೆ ಪಾಕ್‌ ಪ್ರಧಾನಿ ಮಾತುಕತೆ
ಭಾರತದ ವಿಂಗ್‌ ಕಮಾಂಡರ್‌ ಬಂಧನದಿಂದ ಭಾರತ-ಪಾಕ್‌ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಹದಗೆಟ್ಟು, ಯುದ್ಧದ ಭೀತಿ ಆವರಿಸಿತ್ತು. ‘ಅಭಿನಂದನ್‌ ಅವರನ್ನು ಚೌಕಾಶಿಯ ವಸ್ತುವಾಗಿ ಮಾಡಲು ಅವಕಾಶ ಕೊಡುವುದಿಲ್ಲ. ಈ ವಿಚಾರದಲ್ಲಿ ಯಾವುದೇ ಒಪ್ಪಂದವಿಲ್ಲ. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು’ ಪಾಕಿಸ್ತಾನಕ್ಕೆ ಭಾರತ ಸರ್ಕಾರ ಸ್ಪಷ್ಟ ಸಂದೇಶ ರವಾನಿಸಿತ್ತು. ಆಗ ಭಾರತದ ಪ್ರಧಾನಿ ಮೋದಿ ಅವರನ್ನು ಸಂಪರ್ಕಿಸಲು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಪ್ರಯತ್ನಿಸಿದರು. ಆದರೆ ಮೋದಿ ಮಾತುಕತೆಗೆ ನಿರಾಕರಿಸಿದರು.

ವಿಂಗ್‌ ಕಮಾಂಡರ್‌ ಬಿಡುಗಡೆ ಘೋಷಣೆ ಮಾಡಿದ ಪಾಕ್‌
ಎರಡು ದಿನ ಅಭಿನಂದನ್‌ ವರ್ಧಮಾನ್‌ ಅವರನ್ನು ಒತ್ತೆಯಾಳಾಗಿ ಪಾಕಿಸ್ತಾನ ಇಟ್ಟುಕೊಂಡಿತ್ತು. ಭಾರತದ ಜೊತೆಗೆ ಶಾಂತಿ ಕಾಯ್ದುಕೊಳ್ಳುವುದು ಮತ್ತು ಸಂಧಾನಕ್ಕೆ ಬಾಗಿಲು ತೆರೆಯುವ ಮೊದಲ ಹೆಜ್ಜೆಯಾಗಿ ಭಾರತೀಯ ವಾಯುಪಡೆಯ ಪೈಲಟ್‌ನನ್ನು ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಸಂಸತ್‌ನಲ್ಲಿ ಇಮ್ರಾನ್‌ ಖಾನ್‌ ಘೋಷಿಸಿದರು.

ತಾಯ್ನಾಡಿಗೆ ವೀರಪುತ್ರ
ಪಾಕ್‌ ವಶದಲ್ಲಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು 2019 ರ ಮಾ.1 ರಂದು ಬಿಡುಗಡೆ ಮಾಡಲಾಯಿತು. ವಾಘಾ ಗಡಿ ಮೂಲಕ ಭಾರತದ ಯೋಧ ತಾಯ್ನೆಲ ಪ್ರವೇಶಿಸಿದರು. ಅಂದು ರಾತ್ರಿ 9:25 ಕ್ಕೆ ಭಾರತ ಪ್ರವೇಶಿಸುತ್ತಿದ್ದಂತೆ ಗಡಿಯಲ್ಲಿ ನೆರೆದಿದ್ದ ಸಾವಿರಾರು ಜನ ಜಯಘೋಷ ಕೂಗಿದರು. ಅಭಿನಂದನ್‌ ಸ್ವಾಗತಿಸಲು ಅವರ ಪೋಷಕರು, ವಾಯು, ಭೂ, ನೌಕಸೇನೆಯ ಮುಖ್ಯಸ್ಥರು ಸೇರಿದಂತೆ ಸಾವಿರಾರು ಜನ ವಾಘಾ ಗಡಿಯಲ್ಲಿ ಜಮಾಯಿಸಿದ್ದರು. ಅಭಿನಂದನ್‌ ದೇಶಕ್ಕೆ ಆಗಮಿಸುತ್ತಿದ್ದಂತೆ ಬಿಎಸ್‌ಎಫ್‌ ಅಧಿಕಾರಿಗಳು ಅವರನ್ನು ಅಪ್ಪಿಕೊಂಡು ದೇಶಕ್ಕೆ ಸ್ವಾಗತಿಸಿದರು. ಗಡಿಯಲ್ಲಿ ‘ಜೈ ಹಿಂದ್‌’.. ‘ಭಾರತ್‌ ಮಾತಾ ಕೀ ಜೈ’ ಘೋಷಣೆಗಳು ಮೊಳಗಿದವು. ಆ ಯಶಸ್ಸಿನ ದಿನಕ್ಕೆ ಇಂದು 5 ರ ಸಂಭ್ರಮ.