ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ – 9ನೇ ತರಗತಿ ಪರೀಕ್ಷೆಯಲ್ಲಿ ಪ್ರಶ್ನೆ

ಗಾಂಧಿನಗರ: ಶಾಲೆಯ ಪರೀಕ್ಷೆಯಲ್ಲಿ ಮಹಾತ್ಮ ಗಾಂಧೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಯನ್ನು ಕಂಡು ಗುಜರಾತ್ ಶಿಕ್ಷಣಾಧಿಕಾರಿಗಳು ಆಘಾತಕ್ಕೊಳಗಾಗಿದ್ದಾರೆ.

ಗಾಂಧಿನಗರದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆ ‘ಸುಫಲಾಂ ಶಾಲಾ ವಿಕಾಸ ಸಂಕುಲ’ದ ಅಧೀನದಲ್ಲಿನ ಶಾಲೆಯಲ್ಲಿ ಗುಜರಾತಿ ಭಾಷೆಯ 9ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದೆ. ಇಂಟರ್ನಲ್ ಅಸಿಸ್ಮೆಂಟ್ ಪರೀಕ್ಷೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದ್ದು, ಈ ಪ್ರಶ್ನೆಯನ್ನು ನೋಡಿ ಕೆಲ ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳು ತಬ್ಬಿಬ್ಬಾಗಿ ಹೋಗಿದ್ದಾರೆ.

12ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷಾ ಪತ್ರಿಕೆಯಲ್ಲಿ ಅನಧಿಕೃತ ಮದ್ಯ ಮಾರಾಟ ಮತ್ತು ಮಾದಕ ವಸ್ತುಗಳ ಸೇವನೆ ಕುರಿತು ಪ್ರಶ್ನೆ ಕೇಳಲಾಗಿದ್ದು, ನಿಮ್ಮ ಪ್ರದೇಶದಲ್ಲಿ ಮದ್ಯ ಮಾರಾಟ ಹೆಚ್ಚಳ ಸಂಬಂಧ ದೂರು ನೀಡುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆಯಿರಿ ಎಂದು ಕೇಳಲಾಗಿದೆ.

ಖಾಸಗಿ ಶಾಲೆಗಳು ಹಾಗೂ ಅನುದಾನಿತ ಶಾಲೆಗಳ ಆಂತರಿಕ ಮೌಲ್ಯಮಾಪನ ಪರೀಕ್ಷೆಗಳಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪ್ರಶ್ನೆಗಳು ಆಕ್ಷೇಪಾರ್ಹವಾಗಿದ್ದು, ತನಿಖೆ ಪ್ರಾರಂಭಿಸಿದ್ದೇವೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗಾಂಧಿನಗರ ಜಿಲ್ಲೆಯ ಶಿಕ್ಷಣಾಧಿಕಾರಿ ಭರತ್ ವಾಧರ್ ತಿಳಿಸಿದ್ದಾರೆ.

ಸುಫಲಾಂ ಶಾಲಾ ವಿಕಾಸ ಸಂಕುಲ ಎಂಬುದು ಅನುದಾನಿತ ಶಿಕ್ಷಣ ಸಂಸ್ಥೆಯಾಗಿದ್ದು, ರಾಜ್ಯ ಶಿಕ್ಷಣ ಇಲಾಖೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಭರತ್ ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *