ಲವ್ ಮಾಡಿ ಹುಡ್ಗಿ ಜೊತೆ ಬೆಂಗ್ಳೂರಿಗೆ ಬಂದವ ಮತ್ತೊಬ್ಬಾಕೆ ಜೊತೆ ಎಂಗೇಜಾದ – ಪತ್ನಿ ನೇಣಿಗೆ!

ಬೀದರ್: ಗೃಹಿಣಿಯೊಬ್ಬಳ ಮೃತದೇಹ ಬೆಂಗಳೂರು ನಗರದಲ್ಲಿ ಅನುಮಾನಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

4 ದಿನಗಳ ಹಿಂದೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿರುವ ನಿವಾಸದಲ್ಲಿ ಅಶ್ವಿನಿ ಎಂಬವರ ಮೃತದೇಹ ಪತ್ತೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತಿಯೇ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ಮೃತ ಅಶ್ವಿನಿಯ ಪೋಷಕರು ಆರೋಪಿಸಿದ್ದಾರೆ.

ನಡೆದಿದ್ದೇನು?: ಅಶ್ವಿನಿ ಮತ್ತು ನಾಗೇಶ್ ಇಬ್ಬರು ಬೀದರ್ ತಾಲೂಕಿನ ಅಣದೂರು ನಿವಾಸಿಗಳಾಗಿದ್ದು, ಐದು ವರ್ಷಗಳ ಹಿಂದೆ ಪ್ರೀತಿಸಿಸುತ್ತಿದ್ದರು. ನಂತರ ಇವರ ಮದುವೆಗೆ ಮನೆಯವರು ಒಪ್ಪದ ಕಾರಣ ಬೀದರ್ ನಿಂದ ಬೆಂಗಳೂರಿಗೆ ಓಡಿ ಬಂದಿದ್ದರು. ನಂತರ ಇಬ್ಬರು ಮದುವೆಯಾಗಿ ಮಾದನಾಯಕನಹಳ್ಳಿ ವಾಸವಾಗಿದ್ದರು. ಅಶ್ವಿನಿ ಗೃಹಿಣಿಯಾಗಿದ್ದು, ನಾಗೇಶ್ ಮಾತ್ರ ಕೆಲಸಕ್ಕೆ ಹೋಗುತ್ತಿದ್ದನು. ಆದರೆ ದಿನ ಕಳೆಯುತ್ತಿದ್ದಂತೆ ಆರೋಪಿ ನಾಗೇಶ್ ಬೇರೆ ಹುಡುಗಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ.

ಪತಿಯ ಅನೈತಿಕ ಸಂಬಂಧದ ವಿಚಾರ ಅಶ್ವಿನಿಗೆ ತಿಳಿದಿದೆ. ನಂತರ ಅಶ್ವಿನಿ ಮತ್ತು ನಾಗೇಶ್ ಮಧ್ಯೆ ಪ್ರತಿದಿನ ಇದೇ ವಿಚಾರಕ್ಕೆ ಜಗಳ ನಡೆಯುತ್ತಿತ್ತು. ಒಂದು ದಿನ ಅದೇ ವಿಚಾರಕ್ಕೆ ಮತ್ತೆ ಜಗಳವಾಡುತ್ತಿದ್ದಾಗ ಆರೋಪಿ ನಾಗೇಶ್ ಕೋಪಗೊಂಡು ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಆದರೆ ಅಂದೇ ಆಕೆ ಬೆಲ್ಟಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಆರೋಪಿ ನಾಗೇಶ್ ಪೊಲೀಸರಿಗೆ ಕರೆ ಮಾಡಿ ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದು ಆಕೆಯ ಸಂಬಂಧಿಕರಿಗೆ ಮಾಹಿತಿ ತಿಳಿಸಿದ್ದಾರೆ. ತಾನೇ ಕೊಲೆ ಮಾಡಿ ಆತ್ಮಹತ್ಯೆ ಅಂತ ಬಿಂಬಿಸಲು ಬೆಲ್ಟ್ ನಿಂದ ನೇಣು ಹಾಕಿದ್ದಾನೆ ಎಂದು ಮೃತ ಅಶ್ವಿನಿ ಪೋಷಕರು ಆರೋಪಿಸುತ್ತಿದ್ದಾರೆ.

ಇಂದು ಮೃತ ಅಶ್ವಿನಿ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಬೀದರ್ ಗೆ ತರಲಾಗಿದೆ. ಆದರೆ ಮಗಳ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯಕ್ಕೆ ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಾಗೇಶ್ ನನ್ನು ಬಂಧಿಸಿ ವಿಚಾರಣೆಯನ್ನು ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *