ಅಕ್ರಮ ಕಟ್ಟಡ ನಿರ್ಮಾಣದಿಂದ ಕುಸಿದ ಮನೆಯ ಕಾಂಪೌಂಡ್ – 10 ಲಕ್ಷ ರೂ. ನಷ್ಟ

ಶಿವಮೊಗ್ಗ: ಕಾರ್ಪೊರೇಟ್ ಆಸ್ಪತ್ರೆ ನಿರ್ಮಾಣಕ್ಕೆ ತೆಗೆದ ಪಾಯದಿಂದಾಗಿ ಪಕ್ಕದ ಮನೆಯ ಕಾಂಪೌಂಡ್ ಕುಸಿದು ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ನಗರದ ಜಯನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಜಯನಗರ ಮುಖ್ಯ ರಸ್ತೆಯಲ್ಲಿನ ಜ್ಯೋತಿ ಪ್ರಕಾಶ್ ಅವರ ಮನೆಯ ಕಾಂಪೌಂಡ್ ಕುಸಿದಿದೆ. ಕಾಂಪೌಂಡ್ ಕುಸಿದಿದ್ದರಿಂದ ಸುಮಾರು 10 ಲಕ್ಷ ರೂ.ಗಳಷ್ಟು ನಷ್ಟವಾಗಿದೆ ಎಂದು ಮನೆ ಮಾಲೀಕರು ದೂರಿದ್ದಾರೆ.

ಅಕ್ರಮವಾಗಿ ಖಾಸಗಿ ಆಸ್ಪತ್ರೆಯನ್ನು ಜಯನಗರದಲ್ಲಿ ಕಟ್ಟಲಾಗುತ್ತಿದೆ. ಈ ಕಟ್ಟಡ ನಿರ್ಮಾಣಕ್ಕಾಗಿ ತೆಗೆದ ಅಡಿಪಾಯದ ಗುಂಡಿಯಿಂದಾಗಿ ಜ್ಯೋತಿ ಪ್ರಕಾಶ್ ಅವರ ಮನೆಯ ಕಾಂಪೌಂಡ್ ಕುಸಿದಿದೆ. ಹೀಗೆ ಮುಂದೊಂದು ಅಕ್ಕಪಕ್ಕದ ಕಟ್ಟಡಗಳು ಕುಸಿದರೆ ಏನು ಗತಿಯೆಂದು ಸ್ಥಳೀಯರು ಆತಂಕದಿಂದ ಕಾಲ ಕಳೆಯುವಂತಾಗಿದೆ.

ಕಟ್ಟಡ ನಿರ್ಮಾಣದ ನಿಯಮ ಉಲ್ಲಂಘಿಸಿ ಸೆಟ್-ಬ್ಯಾಕ್ ಬಿಡದೆ ಸುಮಾರು ಐವತ್ತು ಅಡಿ ಆಳದ ಗುಂಡಿಯನ್ನು ಆಸ್ಪತ್ರೆ ನಿರ್ಮಾಣಕ್ಕಾಗಿ ತೆಗೆಯಲಾಗಿದೆ. ಇಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಈ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ವಸತಿ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶ ಇಲ್ಲ. ಆದರೆ, ಇದು ವಾಣಿಜ್ಯ ಕಟ್ಟಡ ಎಂದು ಅನುಮತಿ ಪಡೆದು ನಿರ್ಮಾಣ ಮಾಡುತ್ತಿದ್ದೇವೆ ಎಂದು ಕಾರ್ಪೊರೇಟ್ ಆಸ್ಪತ್ರೆಯ ಪಾಲುದಾರರಲ್ಲಿ ಒಬ್ಬರಾಗಿರುವ ಡಾ.ಮಧುಸೂದನ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *