ಉಡುಪಿಯಲ್ಲಿ ಭಾರೀ ಮಳೆಗೆ ಶಾರ್ಟ್ ಸರ್ಕ್ಯೂಟ್​​ನಿಂದಾಗಿ ಮನೆಗೆ ಬೆಂಕಿ – 1 ಲಕ್ಷ ನಷ್ಟ

ಉಡುಪಿ: ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದ್ದು, ಕಡಿಯಾಳಿಯಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ ತಗುಲಿದೆ. ಮನೆಯ ಭಾಗಶಃ ಹಾನಿಯಾಗಿದ್ದು ಸೊತ್ತುಗಳು ನಷ್ಟವಾಗಿದೆ.

ಮುಕೇಶ್ ರಾವ್ ಎಂಬವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್​​ ಆಗಿದ್ದು ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿದ್ದ ಟಿವಿ, ಫ್ಯಾನ್, ಕಪಾಟು, ಹಾರ್ಮೋನಿಯಂ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ದುರ್ಘಟನೆ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ. ಪಕ್ಕದ ಮನೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದ ಭಾರೀ ಅವಘಡ ತಪ್ಪಿದೆ.

ಸುಮಾರು 1 ಲಕ್ಷ ರೂಪಾಯಿಯಷ್ಟು ಮೊತ್ತದ ವಸ್ತುಗಳು ನಷ್ಟವಾಗಿದೆ. ಆಟೋ ಡ್ರೈವರ್ ಆಗಿರುವ ಮುಕೇಶ್ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಪರಿಹಾರ ಮೊತ್ತ ಕೊಡುವಂತೆ ಒತ್ತಾಯಿಸಲಾಗಿದೆ.

ನಾನು 9 ಗಂಟೆಯಷ್ಟು ಹೊತ್ತಿಗೆ ಮನೆಗೆ ಬೀಗ ಹಾಕಿ ಹೋಗಿದ್ದೆ. 9.30ರ ಹೊತ್ತಿಗೆ ಫೋನ್ ಬಂತು. ಕೂಡಲೇ ಬಂದಿದ್ದೇನೆ. ಮನೆಗೆ ಬರುವಷ್ಟರಲ್ಲಿ ಬೆಂಕಿ ಆವರಿಸಿಕೊಂಡಿದ್ದು, 85 ರಿಂದ ಸುಮಾರು ಒಂದು ಲಕ್ಷದವರೆಗೆ ನಷ್ಟವಾಗಿದೆ ಅಂತ ಮುಕೇಶ್ ರಾವ್ ಹೇಳಿದ್ದಾರೆ.

ಸ್ಥಳೀಯ ಮಣೀಂದ್ರ ಮಾತನಾಡಿ, ಬಡತನದ ಕುಟುಂಬದಲ್ಲಿ ಮುಕೇಶ್ ಜೀವನ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳ ಕೂಡಲೇ ಬಂದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಮಳೆ ಹಾನಿಯ ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಪರಿಹಾರ ಕೊಡಬೇಕಾಗಿದೆ ಎಂದರು.

Comments

Leave a Reply

Your email address will not be published. Required fields are marked *