ಹಬ್ಬಕ್ಕೆ ದುಡ್ಡು ಕೊಡದ್ದಕ್ಕೆ ಹೋಟೆಲ್‍ಗೆ ನುಗ್ಗಿ ದಾಂಧಲೆ- ಅಡ್ಡ ಬಂದ ಮಾಲೀಕನನ್ನೇ ಕೆಳಗೆ ಹಾಕಿ ತುಳಿದ್ರು

ಬೆಂಗಳೂರು: ಹಬ್ಬದ ನೆಪದಲ್ಲಿ ವಸೂಲಿ ಮಾಡ್ತಿದ್ದ ಯುವಕರು ಕೇಳಿದಷ್ಟು ಹಣ ಕೊಡಲಿಲ್ಲವೆಂದು ಹೋಟೆಲ್‍ವೊಂದಕ್ಕೆ ನುಗ್ಗಿ ದಾಂಧಲೆ ನಡೆಸಿ, ಮಾಲೀಕನ ಮೇಲೆ ಹಲ್ಲೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಯುಗಾದಿ ಹಬ್ಬದ ಮರುದಿನ ಅಂದರೆ ಸೋಮವಾರ ಬೆಂಗಳೂರಿನ ಕಗ್ಗದಾಸಪುರ ರೈಲ್ವೆ ಗೇಟ್ ಬಳಿ ಇರೊ ಉಡುಪಿ ರುಚಿಯ ಹೋಟೆಲ್ ಮುಚ್ಚೋ ಸಮಯ. ಇನ್ನೇನು ಹೋಟೆಲ್ ಮುಚ್ಚಬೇಕು ಅನ್ನುವಷ್ಟರಲ್ಲಿ ಇಬ್ಬರು ಕುಡಿದುಕೊಂಡು ಹೋಟೆಲ್ ಒಳಗೆ ನುಗ್ಗಿದ್ದಾರೆ. ಸೀದಾ ಕಿಚನ್‍ಗೆ ಹೋದ ಆರೋಪಿಗಳು ಕಾರ್ಮಿಕರನ್ನ ಥಳಿಸಿದ್ದಾರೆ. ಇದೇನಾಗ್ತಿದೆ ಅಂತಾ ಮಾಲೀಕ ಪ್ರಕಾಶ್ ಅಡ್ಡ ಬಂದು ಗೂಂಡಾಗಳನ್ನ ಆಚೆ ತಳ್ಳೋದಕ್ಕೆ ಶುರು ಮಾಡಿದ್ದಾರೆ. ಈ ವೇಳೆ ಪ್ರಕಾಶ್ ಮೇಲೆ ದುಷ್ಕರ್ಮಿಗಳು ಹೆಲ್ಮೆಟ್‍ನಿಂದ ತಲೆಗೆ ಹಲ್ಲೆ ನಡೆಸಿದ್ದಾರೆ. ನಂತರ ಏಳೆಂಟು ಜನ ಗೂಂಡಾಗಳು ಸೇರಿಕೊಂಡು ಮಾಲೀಕನನ್ನ ಹೋಟೆಲ್‍ನಿಂದ ಹೊರಗೆ ಎಳೆದೊಯ್ದು ಕೆಳಗೆ ಹಾಕಿ ತುಳಿದಿದ್ದಾರೆ. ಅಲ್ಲದೇ ತಲೆಗೆ ಕಲ್ಲಿನಿಂದ ಹೊಡೆದಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದ ಗೂಂಡಾಗಳು, ಏನೋ ಹಬ್ಬಕ್ಕೆ ಕೇಳಿದಷ್ಟು ಹಣ ಕೊಡದೆ ಆಟವಾಡ್ತೀಯ. ಗಣೇಶನ ಹಬ್ಬದಲ್ಲೇ ನಿನಗೆ ಟಾರ್ಗೆಟ್ ಇಟ್ಟಿದ್ದೋ. ಇವತ್ತು ಸಿಕ್ಕಾಕೊಂಡಿದ್ದೀಯ ಅಂತಾ ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೇ ಹೋಟೆಲ್‍ನಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕೆಲಸದ ಹುಡುಗರ ಮೇಲೆ ಚೇರ್ ಎಸೆದು ಪುಂಡಾಟ ಮೆರೆದಿದ್ದಾರೆ.

ಹಲ್ಲೆಗೊಳಗಾದ ಪ್ರಕಾಶ್‍ಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ತಲೆಗೆ ಎಂಟು ಸ್ಟಿಚ್ ಹಾಕಲಾಗಿದೆ. ಕೊಲೆ ಯತ್ನ ಪ್ರಕರಣದಡಿ ಆರೋಪಿಗಳನ್ನ ಬಂಧಿಸಿಬೇಕಾದ ಮಹದೇವಪುರ ಪೊಲೀಸ್ರು ಕೈಕಟ್ಟಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಕಾಶ್ ಕುಟುಂಬಕ್ಕೆ ಕೇಸ್ ವಾಪಸ್ ಪಡೆಯುವಂತೆ ಒತ್ತಡ ಬರಲಾರಂಭಿಸಿದೆ ಎನ್ನಲಾಗಿದೆ. ಕೇಸ್ ವಾಪಸ್ ಪಡೆಯದಿದ್ರೆ ಅದ್ಹೇಗೆ ಹೋಟೆಲ್ ನಡೆಸ್ತೀಯೊ ನೋಡ್ತೀವಿ ಅಂತಾ ಅವಾಜ್ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *