ಜಿಎಸ್‍ಟಿ ವಿರೋಧಿಸಿ ಹೋಟೆಲ್ ಬಂದ್- ತುರ್ತು ಔಷಧಿ ಬೇಕಂದ್ರೆ ಈ ನಂಬರಿಗೆ ಕರೆ ಮಾಡಿ

ಬೆಂಗಳೂರು: ಇಷ್ಟು ದಿನ ಅದೆಷ್ಟೋ ಬಂದ್‍ಗಳು ಬಂದು ಹೋಗಿವೆ. ಆದ್ರೆ ಯಾವತ್ತೂ ಹೋಟೆಲ್, ಮೆಡಿಕಲ್ ಸ್ಟೋರ್‍ಗಳು ಬಂದ್ ಆಗ್ತಿರ್ಲಿಲ್ಲ. ಆದ್ರೆ ಇವತ್ತು ದೇಶಾದ್ಯಂತ ಹೋಟೆಲ್‍ಗಳು, ಮೆಡಿಕಲ್ ಸ್ಟೋರ್‍ಗಳೇ ಬಂದ್ ಆಗ್ತಿವೆ. ಇದಕ್ಕೆ ಕಾರಣ ಮೋದಿ ಸರ್ಕಾರ.

ಹೌದು. ಕೇಂದ್ರದ ಉದ್ದೇಶಿತ ಮಹತ್ವಾಕಾಂಕ್ಷಿ ಜಿಎಸ್‍ಟಿ ಬಿಲ್ ಜೂನ್ ಒಂದರಿಂದ ಜಾರಿಗೆ ಬರ್ತಿದೆ. ಆದ್ರೆ 25 ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವ ಹೋಟೆಲ್‍ಗಳಿಗೆ ಹೆಚ್ಚಿನ ತೆರಿಗೆ ಮತ್ತು ಆನ್‍ಲೈನ್‍ನಲ್ಲಿ ಔಷಧಿ ಮಾರಾಟ ವಿರೋಧಿಸಿ ಇವತ್ತು ಬಂದ್ ನಡೀತಿದೆ. ಕೇಂದ್ರದ ಜೊತೆ ನಡೆದ ಮಾತುಕತೆ ವಿಫಲವಾದ ಕಾರಣ ಒಂದು ದಿನದ ಸಾಂಕೇತಿಕ ಪ್ರತಿಭಟನೆ ನಡೆಸಲಾಗ್ತಿದೆ. ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಪ್ರತಿಭಟನೆಗೆ ಬೆಂಗಳೂರು ಹೋಟೇಲ್ ಮಾಲೀಕರ ಸಂಘ ಸಾಥ್ ನೀಡ್ತಿದೆ. ಹೀಗಾಗಿ, ಹೋಟೆಲ್‍ಗಳು ಬಂದ್ ಆಗಲಿದ್ದು, ಕಾಫೀ, ಟೀ ಇಲ್ಲ, ಊಟನೂ ಸಿಗೋದಿಲ್ಲ.

ಈ ನಂಬರಿಗೆ ಕರೆ ಮಾಡಿ: ಮೆಡಿಕಲ್ ಸ್ಟೋರ್‍ಗಳು ಬಂದ್ ಆಗುತ್ತಲ್ಲ ಅನ್ನೋ ಆತಂಕ ಬೇಡ. ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನ 6 ವಿಭಾಗಗಳಲ್ಲಿ ಸರ್ಕಾರ ನೋಡಲ್ ಅಧಿಕಾರಿಗಳ ನೇಮಕ ಮಾಡಿದೆ. ಅಗತ್ಯ ಔಷಧಿಗಳ ಪೂರೈಕೆಗೆ ಸಾರ್ವಜನಿಕರು 104, 108ಗೆ ಕರೆ ಮಾಡಿ ತಿಳಿಸಬಹುದು. ಈ ನೋಡಲ್ ಅಧಿಕಾರಿಗಳು ಔಷಧಿಗಳ ಲಭ್ಯತೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕಿಮ್ಸ್ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳು ಮತ್ತು ಕೆಲವು ನರ್ಸಿಂಗ್ ಹೋಮ್‍ಗಳಲ್ಲಿರೋ ಮೆಡಿಕಲ್ ಶಾಪ್‍ಗಳನ್ನು ಬಂದ್‍ನಿಂದ ಹೊರಗಿಡಲಾಗಿದೆ.

ಮೆಡಿಕಲ್ ಸ್ಟೋರ್‍ಗಳು ಬಂದ್ ಆಗ್ತಿರೋದು ಇತಿಹಾಸದಲ್ಲಿ ಇದೇ ಮೊದಲು. ಹಾಗೇ ಎಲ್ಲಾ ಹೋಟೆಲ್‍ಗಳು ಬಂದ್ ಆಗೋದಿಲ್ಲ. ಆದ್ರೂ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.

ಬಳ್ಳಾರಿಯಲ್ಲಿ ಹೋಟೆಲ್ ಬಂದ್ ಇಲ್ಲ: ರಾಜ್ಯದ ಹಲವೆಡೆ ಹೋಟೆಲ್ ಮಾಲೀಕರ ಸಂಘದವರು ಬಂದ್‍ಗೆ ಕರೆ ನೀಡಿದ್ರೆ, ಬಳ್ಳಾರಿಯಲ್ಲಿ ಬಂದ್ ಆಚರಿಸದಿರಲು ನಿರ್ಧರಿಸಿದ್ದಾರೆ. ಇವತ್ತು ಬಳ್ಳಾರಿಯಲ್ಲಿ ಹೋಟೆಲ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಸೋಮವಾರ ರಾತ್ರಿ ಸಭೆ ನಡೆಸಿ ಬಂದ್ ಮಾಡದಿರಲು ನಿರ್ಧಾರ ಕೈಗೊಂಡಿದ್ದಾರೆ. ಆದ್ರೆ ಬಳ್ಳಾರಿಯಲ್ಲಿ ಮೆಡಿಕಲ್ ಸ್ಟೋರ್‍ಗಳು ಇಂದು ಪೂರ್ವ ನಿರ್ಧಾರದಂತೆ ಬಂದ್ ಆಗಿವೆ.

Comments

Leave a Reply

Your email address will not be published. Required fields are marked *