ಮಲಗಿದ್ದ ಪತ್ನಿ, ಮಗಳಿಗೆ ಬೆಂಕಿ ಹಚ್ಚಿ ತಾನೂ ಬಿದ್ದ

– ಅಪ್ಪ-ಮಗಳು ದುರ್ಮರಣ
– ಪತ್ನಿ ಗಂಭೀರ

ಹೈದರಾಬಾದ್: ವ್ಯಕ್ತಿಯೊಬ್ಬ ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನಗೊಂಡು ಪತ್ನಿ ಮತ್ತು ಮಗಳಿಗೆ ಬೆಂಕಿ ಹಚ್ಚಿ, ತಾನೂ ಅದೇ ಬೆಂಕಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಜಯಣ್ಣ ಮತ್ತು ಮಗಳು ಗಾಯಿತ್ರಿ ಮೃತರು. ವನಪಾರ್ತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಯ್ಯವರಿಪಲ್ಲಿಯ ಜಯಣ್ಣ, ವರಲಕ್ಷ್ಮಿಯನ್ನು 20 ವರ್ಷಗಳ ಹಿಂದೆ ಮದುವೆಯಾಗಿದ್ದನು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಜಯಣ್ಣ ವೃತ್ತಿಯಲ್ಲಿ ಚಾಲಕನಾಗಿದ್ದು, ಮದ್ಯ ವ್ಯಸನಿಯಾಗಿದ್ದನು. ಮದುವೆಯಾದಾಗಿನಿಂದ ಪತ್ನಿಗೆ ತನ್ನ ಅನುಮಾನದಿಂದ ಕಿರುಕುಳ ನೀಡುತ್ತಿದ್ದ.

ಇತ್ತೀಚೆಗೆ ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿ ನನಗೆ ಮೋಸ ಮಾಡಿದ್ದಾಳೆ ಎಂದು ವರಲಕ್ಷ್ಮಿಯ ಮೇಲೆ ಹಲ್ಲೆ ನಡೆಸಿದ್ದನು. ಅಲ್ಲದೇ ಪತ್ನಿಗೆ ಇದೇ ವಿಚಾರಕ್ಕೆ ಪ್ರತಿದಿನ ಹೊಡೆಯುತ್ತಿದ್ದನು. ಪ್ರತಿ ಬಾರಿ ಅಪ್ಪ, ಅಮ್ಮನನ್ನು ಹೊಡೆಯುತ್ತಿದ್ದ ವೇಳೆ ಮಗಳು ಗಾಯಿತ್ರಿ ಮಧ್ಯೆ ಪ್ರವೇಶಿಸಿ ತಾಯಿ ಪರ ಮಾತನಾಡುತ್ತಿದ್ದಳು. ಇದರಿಂದ ಮತ್ತಷ್ಟು ಕೋಪಗೊಂಡ ಜಯಣ್ಣ ಇಬ್ಬರನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ.

ತನ್ನ ಪ್ಲಾನ್ ನಂತೆ ಜನವರಿ 1 ರಂದು ರಾತ್ರಿ ಪೆಟ್ರೋಲ್ ತಂದು ಮಲಗಿದ್ದ ಪತ್ನಿ ಮತ್ತು ಮಗಳ ಮೇಲೆ ಸುರಿದಿದ್ದಾನೆ. ತಕ್ಷಣ ಮಗಳು ಎಚ್ಚರಗೊಂಡ ಪರಿಣಾಮ ಕೂಡಲೇ ಪಾಪಿ ತಂದೆ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಬೆಂಕಿಯಲ್ಲಿ ಜಯಣ್ಣ ಕೂಡ ಸಿಲುಕಿಕೊಂಡಿದ್ದನು. ಇದನ್ನು ನೋಡಿ ನೆರೆಹೊರೆಯವರು ತಕ್ಷಣ ಎಲ್ಲರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು.

ಹೆಚ್ಚಿನ ಚಿಕಿತ್ಸೆಗಾಗಿ ಗಾಯಿತ್ರಿಯನ್ನು ಮಹಾಬುಬ್ ನಗರ್ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಇನ್ನೂ ಚಿಕಿತ್ಸೆ ಫಲಕಾರಿಯಾಗದೇ ಜಯಣ್ಣ ಗುರುವಾರ ಸಾವನ್ನಪ್ಪಿದ್ದಾನೆ. ವರಲಕ್ಷ್ಮಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ. ಈ ಘಟನೆ ಸಂಬಂಧ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *