ಬೆಳಗಾವಿ ಆಸ್ಪತ್ರೆಯಲ್ಲಿ ವಂಚಕರಿದ್ದಾರೆ ಹುಷಾರ್ !

ಬೆಳಗಾವಿ: ಬ್ಯಾಂಕ್, ಸೊಸೈಟಿ, ಬಸ್ ನಿಲ್ದಾಣಗಳು ಸೇರಿದಂತೆ ಅನೇಕ ಕಡೆಗಳಲ್ಲಿ ವಂಚನೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಂಬಂಧಿಗಳಿಗೆ ವಂಚನೆ ಮಾಡುವುದನ್ನು ಕುಲ ಕಸುಬುವನ್ನಾಗಿ ಮಾಡಿಕೊಂಡು ಸಿಕ್ಕಿಬಿದ್ದಿದ್ದಾನೆ.

ಆರೋಪಿ ಸುರೇಶ್ ಕೆಎಲ್‍ಇ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿ ಹುಕ್ಕೇರಿ ತಾಲೂಕಿನ ಶಾಂತವ್ವಗೆ ವಂಚಿಸಿ ಕೊನೆಗೂ ಪೊಲೀಸ್ ಅತಿಥಿಯಾಗಿದ್ದಾನೆ. ಶಾಂತವ್ವ ಬಳಿ ನಿಮಗೆ 60 ಸಾವಿರ ಬಿಲ್ ಹಣ ಕಡಿಮೆ ಆಗುತ್ತದೆ, ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕೊಡಿ ಎಂದು ಹೇಳಿದ್ದಾನೆ. ಈತನನ್ನು ನಂಬಿದ್ದ ಶಾಂತವ್ವ ಎಲ್ಲಾ ದಾಖಲೆಗಳನ್ನು ಜೆರಾಕ್ಸ್ ಮಾಡಿಕೊಟ್ಟಿದ್ದಾರೆ. ಬಳಿಕ ನಿಮ್ಮ ಬಳಿ ಬಂಗಾರ ಇದೆ ಅಂತ ಗೊತ್ತಾದರೆ ನಿಮಗೆ ಹಣ ಸಿಗಲ್ಲವೆಂದು ಬಂಗಾರವನ್ನು ನಿಮ್ಮ ಸಹೋದರನ ಕೈಯಲ್ಲಿ ಕೊಡಿ ಎಂದು ಕೊಡಿಸುತ್ತಾನೆ.

ಆರೋಪಿ ಶಾಂತವ್ವರನ್ನು ಬೇರೆ ಕಡೆ ನಿಲ್ಲಿಸಿ ಮತ್ತೆ ಆಕೆಯ ಸಹೋದರನ ಬಳಿ ಬಂದು ಬಂಗಾರ, ಹಣದ ಬ್ಯಾಗ್ ಕೊಡುವುದಕ್ಕೆ ನಿಮ್ಮ ಸಹೋದರಿ ಹೇಳಿದ್ದಾರೆ ಎಂದು ಸುಳ್ಳು ಹೇಳಿ ಹಣದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಶಾಂತವ್ವಳಿಗೆ ತಾನು ಮೋಸ ಹೋಗಿದ್ದೇನೆ ಎಂದು ತಿಳಿದಾಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈಗ ಆರೋಪಿ ಸುರೇಶ್ ಕೊನೆಗೂ ಎಪಿಎಂಸಿ ಪೊಲೀಸರ ಅತಿಥಿಯಾಗಿದ್ದಾನೆ ಎಂದು ಸ್ಥಳೀಯ ಬಾಲ ಸಂಗೋಡಿ ತಿಳಿಸಿದ್ದಾರೆ.

ಕೆಎಲ್‍ಇ ಆಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಗಳ ತರಹ ಓಡಾಡುತ್ತಿರುವ ಈತ ಸಾಮಾನ್ಯನಲ್ಲ. ಮೊದಲಿಗೆ ರೋಗಿಯ ಸಂಬಂಧಿಗಳ ಜೊತೆಗೆ ಮಾತಿಗೆ ಇಳಿದು, ಎಷ್ಟು ಬಿಲ್ ಆಗಿದೆ ಎಂದು ಕೇಳುತ್ತಾನೆ. ಸಹಜವಾಗಿ ಬಿಲ್ ಹೆಚ್ಚಾಗಿದೆ ಅಂತ ಹೇಳಿದರೆ, ಈತ ತನ್ನ ಕೆಲಸ ಶುರುಮಾಡಿಕೊಳ್ಳುತ್ತೇನೆ. ನಿಮಗೆ ಸರ್ಕಾರದ ಆ ಯೋಜನೆಯಲ್ಲಿ ಹಣ ಕೊಡಿಸುತ್ತೇನೆ, ಈ ಯೋಜನೆಯಲ್ಲಿ ಬಿಲ್ ಕಡಿಮೆ ಮಾಡಿಸುತ್ತೀನಿ ಅಂತ ನಂಬಿಸಿ ಕೊನೆಗೆ ಎಲ್ಲಾ ಒಡವೆಯನ್ನು ಮತ್ತು ಹಣವನ್ನು ಲಪಟಾಯಿಸಿ ಪರಾರಿ ಆಗುವುದೇ ಈತನ ಕಾಯಕವಾಗಿದೆ ಎಂದು ಬೆಳಗಾವಿ ಡಿಸಿಪಿ ಮಹಾಲಿಂಗ್ ನಂದಗಾವಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *