ಹೋಂ ಸ್ಟೇಯಲ್ಲಿ ವಾಸ್ತವ್ಯ ಮಾಡಿದ್ದ 6 ಮಂದಿ ವಿರುದ್ಧ ಎಫ್‍ಐಆರ್

– ವೈದ್ಯಕೀಯ ಪಾಸ್ ಪಡೆದು ಬೆಂಗಳೂರಿನಿಂದ ಆಗಮನ

ಮಡಿಕೇರಿ: ಕೊರೊನಾ ವೈರಸ್ ಹಿನ್ನೆಲೆ ರಾಜ್ಯಾದ್ಯಂತ ಲಾಕ್‍ಡೌನ್ ಇದೆ. ಜನ ಸಾಮಾನ್ಯರಿಗೆ ವೈದ್ಯಕೀಯ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಪಾಸ್ ಪಡೆದು ಕೊಡಗು ಜಿಲ್ಲೆಗೆ ಆಗಮಿಸಿ ಹೋಮ್ ಸ್ಟೇವೊಂದರಲ್ಲಿ ವಾಸ್ತವ್ಯ ಹೂಡಿದ್ದವರ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಜಿಲ್ಲಾ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

ಹೊದ್ದೂರು ಗ್ರಾಮ ಪಂಚಾಯಿತಿಗೆ ಒಳಪಡುವ ಚಿನ್ನಪ್ಪ ಮಾಲೀಕತ್ವದ ರಿವರ್ ವ್ಯಾಲಿ ಬಂಗಲೋ ಹೋಮ್ ಸ್ಟೇಗೆ 15 ದಿನಗಳ ಹಿಂದೆ ತುಮಕೂರು ಮೂಲದ ಇಬ್ಬರು ವ್ಯಕ್ತಿಗಳು ಬೆಂಗಳೂರಿನಿಂದ ಬಂದು ವಾಸ್ತವ್ಯ ಹೂಡಿರುವುದು ಕಂಡುಬಂದಿದೆ. ಅವರನ್ನು ಹೋಮ್ ಸ್ಟೇನಲ್ಲಿಯೇ ಕ್ವಾರಂಟೈನ್ ಮಾಡಿ ಹೋಮ್ ಸ್ಟೇ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿತ್ತು.

17ರಂದು ಬೆಂಗಳೂರು ಮೂಲದ ಒಬ್ಬರು ಮಹಿಳೆಯರು ಬೆಂಗಳೂರು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ವೈದ್ಯಕೀಯ ಪಾಸ್ ಪಡೆದಿದ್ದಾರೆ. ನಂತರ ತುಮಕೂರು ಮೂಲದ ವ್ಯಕ್ತಿ ಹಾಗೂ ಮಹಿಳೆಯೊಂದಿಗೆ ರಿವರ್ ವ್ಯಾಲಿ ಬಂಗಲೋ ಹೋಮ್ ಸ್ಟೇಗೆ ಬಂದು ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ಅನಧಿಕೃತವಾಗಿ ವಾಸ್ತವ್ಯ ಹೂಡಿದ್ದವರ ಹಾಗೂ ಮಾಲೀಕರನ್ನು ವಶಕ್ಕೆ ಪಡೆದು, ಜಿಲ್ಲಾ ಕ್ವಾರಂಟೈನ್‍ಗೆ ಸೇರಿಸಲಾಗಿದೆ.

ಶನಿವಾರ ರಾತ್ರಿಯೇ ಹೋಮ್ ಸ್ಟೇಗೆ ಸೀಲ್ ಮಾಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದ ಇತರೆಡೆಗಳಿಂದ ಬಂದು ಕೊಡಗಿನ ಹೋಮ್ ಸ್ಟೇ, ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡುವ ಬಗ್ಗೆ ಕೆಲವು ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವ ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಚಟುವಟಿಕೆಗಳ ಬಗ್ಗೆ ಕೊಡಗು ಪೊಲೀಸ್ ತೀವ್ರ ನಿಗಾ ವಹಿಸಿದೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪನ್ನೇಕರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *