ಹೋಂ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಕಾನೂನು ಉಲ್ಲಂಘನೆ- ಮಡಿಕೇರಿಯಲ್ಲಿ ಮೊದಲ ಪ್ರಕರಣ ದಾಖಲು

ಮಡಿಕೇರಿ: ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರೆ ದುಬೈನಿಂದ ಬಂದು ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದರೂ ಸಾಮಾನ್ಯನಂತೆ ಓಡಾಡಿಕೊಂಡಿದ್ದ ವ್ಯಕ್ತಿಯ ವಿರುದ್ಧ ಕೊಡಗಿನಲ್ಲಿ ಮೊದಲ ಪ್ರಕರಣ ದಾಖಲಾಗಿದೆ.

ಮಡಿಕೇರಿ ನಗರದ ಗಣಪತಿ ಬೀದಿಯ 39 ವರ್ಷದ ವ್ಯಕ್ತಿ ಕಳೆದ ಒಂದು ವಾರದ ಹಿಂದೆ ದುಬೈನಿಂದ ಬಂದಿದ್ದನು. ಬಳಿಕ ಆಸ್ಪತ್ರೆಯಲ್ಲಿ ಪರಿಶೀಲನೆಗೆ ಒಳಪಟ್ಟು ಹೋಂ ಕ್ವಾರಂಟೈನ್ ನಲ್ಲಿದ್ದನು. ಆದರೆ ಆ ವ್ಯಕ್ತಿ ಮನೆಯಲ್ಲಿ ಸುಮ್ಮನಿರುವುದು ಬಿಟ್ಟು ಮಡಿಕೇರಿಯಲ್ಲಿ ಓಡಾಡಿಕೊಂಡಿದ್ದನು ಎಂದು ಹೇಳಲಾಗುತ್ತಿದೆ. ಹೀಗಾಗಿ ಅಕ್ಕಪಕ್ಕದ ಮನೆಯ ಜನರು ಆತನ ವಿರುದ್ಧ ನಗರಸಭೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕೂಡಲೇ ಎಚ್ಚೆತ್ತುಕೊಂಡ ಮಡಿಕೇರಿ ನಗರಸಭೆ ಪೌರಾಯುಕ್ತ ರಮೇಶ್ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು, ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 188, 269, 270 ಮತ್ತು 271 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಆತನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದ್ದು, ಅಲ್ಲಿಯೇ ಪ್ರಕರಣ ಕೊಠಡಿಯಲ್ಲಿ ದಾಖಲಿಸಿಕೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *