ಇಂತಹ ಘಟನೆಗಳಿಂದ ಸಮಾಜಕ್ಕೆ ಕೆಟ್ಟ ಸಂದೇಶ – ಬೀದರ್‌ ದರೋಡೆ ಕೇಸ್‌ ಬಗ್ಗೆ ಪರಮೇಶ್ವರ್‌ ಪ್ರತಿಕ್ರಿಯೆ

– ಎಸ್ಪಿಯಿಂದ ಘಟನಾ ವರದಿ ಕೇಳಿದ ಗೃಹ ಸಚಿವ

ಬೆಂಗಳೂರು: ಎಟಿಎಂಗೆ ಹಣ ತುಂಬಲು ಹೋಗಬೇಕಾದಾಗ ಕೆಲವು ಮಾರ್ಗಸೂಚಿಗಳನ್ನ ಕೊಟ್ಟಿರುತ್ತೇವೆ. ಆ ಮಾರ್ಗಸೂಚಿಗಳನ್ನ ಪಾಲನೆ ಮಾಡದೇ ಇದ್ದಾಗ ಇಂತಹ ಘಟನೆಗಳು ಆಗುತ್ತವೆ. ಅಲ್ಲದೇ ಇಂತಹ ಘಟನೆಗಳಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ತಿಳಿಸಿದ್ದಾರೆ.

ಬೀದರ್‌ನಲ್ಲಿ (Bidar) ಹಾಡಹಗಲೇ ರಾಬರಿ & ಮರ್ಡರ್ ಪ್ರಕರಣದ (ATM Robbery And Murder Case) ಕುರಿತು ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ಪ್ರಾಥಮಿಕ ವರದಿಗಳ ಪ್ರಕಾರ 90 ಲಕ್ಷ ರೂ. ಹೋಗಿದೆ ಅಂತ ತಿಳಿದುಬಂದಿದೆ. ಎಟಿಎಂಗೆ ಹಣ ಹಾಕಬೇಕಾದಾಗ ಕೆಲವು ಮಾರ್ಗಸೂಚಿ ಕೊಟ್ಟಿರುತ್ತೇವೆ. ಆ ಮಾರ್ಗಸೂಚಿ ಪಾಲನೆ ಆಗದೇ ಇದ್ದಾಗ ಇಂತಹ ಘಟನೆ ಆಗುತ್ತೆ. ಇಂತಹ ಘಟನೆ ಆದಾಗ ಕೆಟ್ಟ ಸಂದೇಶ ಹೋಗುತ್ತದೆ ಎಂದಿದ್ದಾರೆ.

ಅಲ್ಲದೇ ಏಜೆನ್ಸಿ ಬಗ್ಗೆ ಪರಿಶೀಲನೆ ಮಾಡ್ತೀವಿ. ಕೇವಲ ಹಣಕಾಸು ವಿಚಾರನಾ? ಅಥವಾ ಬೇರೆ ಏನಾದ್ರು ಇದೆಯಾ ಅಂತ ತನಿಖೆ ಮಾಡ್ತೀವಿ. ಎಸ್‌ಪಿಗೆ ತನಿಖೆ ಮಾಡಲು ಸೂಚನೆ ಕೊಟ್ಟಿದ್ದೇನೆ, ಜೊತೆಗೆ ಘಟನಾ ವರದಿ ಕೇಳಿದ್ದೇನೆ. ಆರೋಪಿಗಳ ಪತ್ತೆಗೆ ಇಲಾಖೆ ಕ್ರಮವಹಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಫಿಲ್ಮಿ ಸ್ಟೈಲ್‌ ಎಟಿಎಂ ಹಣ ದರೋಡೆ – ಗನ್‌ಮ್ಯಾನ್‌ ಇಲ್ಲದೇ ಹಣ ತುಂಬಲು ಬಂದಿದ್ದ ಸಿಬ್ಬಂದಿ

ಏನಿದು ಕೇಸ್‌?
ಹಾಡಗಲೇ ಬೀದರ್‌ನಲ್ಲಿ (Bidar) ಸಿನಿಮೀಯ ದರೋಡೆ ನಡೆದಿದ್ದು ಜನತೆ ಬೆಚ್ಚಿ ಬಿದ್ದಿದ್ದಾರೆ. ಕಣ್ಣಿಗೆ ಖಾರದ ಪುಡಿ ಎರಚಿ ಹಣದೊಂದಿಗೆ ಇಬ್ಬರು ದರೋಡೆಕೋರರು ಪರಾರಿಯಾಗಿದ್ದಾರೆ. ಬೆಳಗ್ಗೆ 10:55 ರಿಂದ 11 ಗಂಟೆಯ ಅವಧಿಯ ಒಳಗಡೆ ಈ ಕೃತ್ಯ ನಡೆದಿದೆ. ಸಿಎಂಎಸ್‌ ಸಂಸ್ಥೆ ಎಸ್‌ಬಿಐ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಲು ಬಂದಾಗ ದರೋಡೆ ನಡೆದಿದೆ. ಇದನ್ನೂ ಓದಿ: ಬೀದರ್‌ನಲ್ಲಿ ಎಟಿಎಂ ವಾಹನದ ಮೇಲೆಯೇ ಗುಂಡು – 93 ಲಕ್ಷದೊಂದಿಗೆ ದುಷ್ಕರ್ಮಿಗಳು ಪರಾರಿ

ಈ ದರೋಡೆ ಹಿಂದೆ ಭಾರೀ ಅನುಮಾನ ವ್ಯಕ್ತವಾಗಿದೆ. ಯಾವುದೇ ಎಟಿಎಂನಲ್ಲಿ (ATM) ಹಣ ತುಂಬುವಾಗ ಗನ್‌ಮ್ಯಾನ್‌ ಕಡ್ಡಾಯವಾಗಿ ಇರಲೇಬೇಕು. ಆದರೆ ಇಲ್ಲಿ ಗನ್‌ಮ್ಯಾನ್‌ ಇಲ್ಲದೇ ಹಣ ತುಂಬಲು ಬಂದಿದ್ದಾರೆ. ಪಬ್ಲಿಕ್‌ ಟಿವಿ ಜೊತೆ ಚಾಲಕ ರಾಜಶೇಖರ್‌ ಮಾತನಾಡಿ, ನಾವು ಮೂವರು ಸ್ಥಳಕ್ಕೆ ಬಂದಿದ್ದೆವು. ಬಾಕ್ಸ್‌ ಒಳಗಡೆ ಎಷ್ಟು ಹಣ ಇತ್ತು ಎನ್ನುವುದು ಗೊತ್ತಿಲ್ಲ. ಒಂದೇ ಬಾಕ್ಸ್‌ ಇತ್ತು. ನಾವು ಪ್ರತಿ ದಿನ ಇಲ್ಲಿಯೇ ಎಲ್ಲರೂ ಸೇರಿ ಹಣವನ್ನು ಎಟಿಎಂಗೆ ತುಂಬುತ್ತೇವೆ ಎಂದು ತಿಳಿಸಿದರು.

ಈ ವೇಳೆ ಗನ್‌ಮ್ಯಾನ್‌ ಎಲ್ಲಿದ್ದರು ಎಂಬ ಪ್ರಶ್ನೆಗೆ, ಈ ಕೃತ್ಯ ನಡೆಯುವ ಗನ್‌ಮ್ಯಾನ್‌ ಇರಲಿಲ್ಲ. ಗನ್‌ಮ್ಯಾನ್‌ 1 ಗಂಟೆ ಬಿಟ್ಟು ಬರುತ್ತೇನೆ ಎಂದು ಹೇಳಿದ್ದರು. ಖಾರದ ಪುಡಿ ಎರಚಿದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎಂದು ಹೇಳಿದರು. ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ಗುಂಡಿನ ದಾಳಿಗೆ ಬಲಿಯಾದ ಗಿರಿ ವೆಂಕಟೇಶ ಮೃತದೇಹವನ್ನು ಬ್ರಿಮ್ಸ್ ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಸ್ಥಳಕ್ಕೆ ಎಸ್ಪಿ ಪ್ರದೀಪ್‌ ಗುಂಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.