ಕಾಶ್ಮೀರದ ವಿಚಾರದಲ್ಲಿ ನೆಹರು ಮಾಡಿದ ತಪ್ಪು ಹಿಮಾಲಯಕ್ಕಿಂತ ದೊಡ್ಡದು – ಅಮಿತ್ ಶಾ

ನವದೆಹಲಿ: ಮಾಜಿ ಪ್ರಧಾನಿ ಜವಾಹರ್‍ಲಾಲ್ ನೆಹರು ವಿರುದ್ಧ ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ಕಾಶ್ಮೀರದ ದೀರ್ಘಕಾಲದ ಸಮಸ್ಯೆಗಳಿಗೆ ನೆಹರು ಅವರೇ ಕಾರಣ ಎಂದು ಕಿಡಿಕಾರಿದ್ದಾರೆ.

ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಾಶ್ಮೀರವನ್ನು ಒಟ್ಟಾಗಿ ಕೊಂಡೊಯ್ಯುವ ವಿಚಾರದ ನಿರ್ಧಾರವನ್ನು ಯಾರೊಂದಿಗೂ ಚರ್ಚಿಸದೇ ಜವಾಹರ್‍ಲಾಲ್ ನೆಹರು ವೈಯಕ್ತಿಕವಾಗಿ ತೆಗೆದುಕೊಂಡರು. ಈ ತಪ್ಪು ಹಿಮಾಲಯಕ್ಕಿಂತ ದೊಡ್ಡದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ದಾರ್ ವಲ್ಲಭಾಯ್ ಪಟೇಲರು 630 ಪ್ರಾಂತ್ಯಗಳನ್ನು ಒಗ್ಗೂಡಿಸಿದ್ದರು. ನೆಹರು ಅವರಿಗೆ ಒಂದೇ ಕೆಲಸವಿತ್ತು(ಜಮ್ಮು ಕಾಶ್ಮೀರವನ್ನು ಭಾರತದೊಂದಿಗೆ ಒಗ್ಗೂಡಿಸುವುದು). ಇದನ್ನೂ ನೆಹರು ಅವರು ಸರಿಯಾಗಿ ಮಾಡಲಿಲ್ಲ. ಈ ಕೆಲಸವನ್ನು ಆಗಸ್ಟ್ 2019ರಲ್ಲಿ 370ನೇ ವಿಧಿಯನ್ನು ಮೋದಿ ಸರ್ಕಾರ ರದ್ದುಪಡಿಸುವ ಮೂಲಕ ನಮ್ಮ ಸರ್ಕಾರ ಮಾಡಿತು ಎಂದು ವಾಗ್ದಾಳಿ ನಡೆಸಿದರು.

370ನೇ ವಿಧಿ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ಇಂದೂ ಸಹ 370ನೇ ವಿಧಿ ರದ್ದು ಹಾಗೂ ಕಾಶ್ಮೀರದ ಕುರಿತು ಹಲವು ಊಹಾಪೋಹಗಳು ಓಡಾಡುತ್ತಿವೆ. ಅವುಗಳ ಕುರಿತು ಸ್ಪಷ್ಟಪಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ದೇಶದ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಇತಿಹಾಸವನ್ನು ವಿರೂಪಗೊಳಿಸಿವೆ. 1947ರಿಂದ ಈ ವರೆಗೆ ಜಮ್ಮು ಕಾಶ್ಮೀರ ನಮಗೆ ಚರ್ಚೆಯ ಹಾಗೂ ವಿವಾದದ ವಿಷಯವಾಗಿತ್ತು. ಈ ಇತಿಹಾಸವನ್ನು ಸರ್ವಜನಿಕರಿಗೆ ತಿಳಿಸಲಾಗಿದೆ. ಇತಿಹಾಸ ಬರೆಯುವ ಜವಾಬ್ದಾರಿ ತಪ್ಪುಗಳನ್ನು ಮಾಡಿದ ಜನರ ಕೈಯಲ್ಲೇ ಇದ್ದಿದ್ದರಿಂದ ನಿಜ ಸಂಗತಿಗಳನ್ನು ಮರೆಮಾಚಲಾಗಿತ್ತು. ಸರಿಯಾದ ಇತಿಹಾಸವನ್ನು ಜನರಿಗೆ ತಿಳಿಸುವ ಕಾಲ ಈಗ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರದ ವಿಚಾರವನ್ನು ಪದೆ ಪದೇ ಚರ್ಚಿಸಿದ್ದಕ್ಕೆ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ವಿಶ್ವಸಂಸ್ಥೆಯಲ್ಲಿ ಯಾವುದೇ ದೇಶ ಪಾಕಿಸ್ತಾನವನ್ನು ಬೆಂಬಲಿಸಿಲ್ಲ. ಎಲ್ಲ ದೇಶಗಳು ಭಾರತದ ಆತ್ಮರಕ್ಷಣೆಯ ಹಕ್ಕನ್ನು ಬೆಂಬಲಿಸಿವೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಅತಿ ದೊಡ್ಡ ರಾಜತಾಂತ್ರಿಕ ವಿಜಯವಾಗಿದೆ ಎಂದು ಶ್ಲಾಘಿಸಿದರು.

ಜಮ್ಮು ಕಾಶ್ಮೀರದಲ್ಲಿ ಯಾವುದೇ ರೀತಿಯ ದಿಗ್ಬಂಧನವಿಲ್ಲ. ಅದು ಇರುವುದು ನಿಮ್ಮ ತಲೆಯಲ್ಲಿ. ಕಾಶ್ಮೀರದ 196 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎಲ್ಲೆಡೆ ಕಫ್ರ್ಯೂ ಹಿಂಪಡೆಯಲಾಗಿದೆ. ಕೇವಲ 8 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಶೀಘ್ರದಲ್ಲೇ ಜಮ್ಮು ಕಾಶ್ಮೀರ ಸಹಜ ಸ್ಥಿಯತ್ತ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *