ಕಿಚ್ಚನಿರುವ ಚಂದನವನಕ್ಕೆ ಬರುತಿದೆ ಹಾಲಿವುಡ್ ಟೀಮ್

ಬೆಂಗಳೂರು: ಕಿಚ್ಚ ಸುದೀಪ್ ಎಷ್ಟೊಂದ್ ಬ್ಯುಸಿ ಅಂತ ನಿಮಗೆಲ್ಲ ಗೊತ್ತೇ ಇದೆ. ಹತ್ತಾರು ಸಿನಿಮಾಗಳು, ರಿಯಾಲಿಟಿ ಶೋಗಳಲ್ಲಿ ಬ್ಯೂಸಿ ಆಗಿರುತ್ತಾರೆ. ಇದರ ನಡುವೆ ಬೇರೆ ಹಾಲಿವುಡ್ ಸಿನಿಮಾದ ಆಫರ್ ಸಹ ಬಂದಿದೆ. ಇಷ್ಟೆಲ್ಲಾ ಬ್ಯುಸಿ ಇರುವ ಸುದೀಪ್ ಅವರ ಖದರ್ ಏನು ಅನ್ನೋದು ಹಾಲಿವುಡ್ ಮಂದಿಗೂ ಗೊತ್ತಿದೆ. ಹೀಗಾಗಿಯೇ ಸದೀಪ್ ರನ್ನು ಹುಡುಕಿಕೊಂಡು ಕನ್ನಡ ನಾಡಿಗೆ ಬರೋಕೆ ಹಾಲಿವುಡ್ ಟೀಮ್ ರೆಡಿಯಾಗಿದೆ.

ಹಾಲಿವುಡ್ ಚಿತ್ರದಲ್ಲಿ ಅಭಿನಯಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟ ಚಿತ್ರದ ಶೀರ್ಷಿಕೆ ರೈಸನ್ ಅಂತಾ ಹೇಳಲಾಗಿದೆ. ಈ ರೈಸನ್ ಚಿತ್ರತಂಡ ಸುದೀಪ್‍ಗಾಗಿ ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ಬರುತ್ತಿದೆ. ಸುದೀಪ್ ಅವರಿಗೆ ಆಸ್ಟ್ರೇಲಿಯಾಗೆ ತೆರಳಿ ಕತೆ ಕೇಳುವ ಸಮಯವಿಲ್ಲದಿರುವುದರಿಂದ ಇದೇ ತಿಂಗಳು 22 ರಂದು ಬೆಂಗಳೂರಿಗೆ ಬರಲಿದೆ. ಫೋಟೋಶೂಟ್ ಕೂಡ ಇಲ್ಲಿಯೇ ನಡೆಸುವ ಯೋಜನೆಯನ್ನು ಹೊಂದಿದೆ. ಖಾಸಗಿ ಹೋಟೆಲ್‍ವೊಂದರಲ್ಲಿ ಸುದ್ದಿಗೋಷ್ಟಿಯನ್ನೂ ನಡೆಸೋಕೆ ರೈಸನ್ ಚಿತ್ರತಂಡ ಪ್ಲ್ಯಾನ್ ಮಾಡಿದೆ.

ಇದು ಆಸ್ಟ್ರೇಲಿಯಾ ತಂಡದ ಸಿನಿಮಾ. ನಿರ್ದೇಶಕರೇ ನನ್ನ ಸಂಪರ್ಕಿಸಿದ್ದರು. ಸಿನಿಮಾದ ಬಗ್ಗೆ ನಾನೇನೂ ಮಾತನಾಡಲ್ಲ. ಕೆಲಸ ಮಾತನಾಡಬೇಕು ಅನ್ನೋದು ನನ್ನ ಸಿದ್ಧಾಂತ. ಒಂದೊಳ್ಳೆ ಸಿನಿಮಾ ಅನ್ನುವ ಕಾರಣಕ್ಕೆ ಒಪ್ಪಿಕೊಂಡಿದ್ದೇನೆ. ಹೆಚ್ಚೇನೂ ಗೊತ್ತಿಲ್ಲ. ಕಥೆಯ ಚರ್ಚೆಗಾಗಿ ನಾನು ಆಸ್ಟ್ರೇಲಿಯಾಗೆ ಹೋಗಬೇಕಿತ್ತು. ಆದ್ರೆ ಸಾಧ್ಯವಾಗಲಿಲ್ಲ. ಹೀಗಾಗಿ ಅದೇ ತಂಡ ಅಕ್ಟೋಬರ್ 22 ಕ್ಕೆ ಬೆಂಗಳೂರಿಗೆ ಬರುತ್ತಿದೆ. ಅಂದೇ ಮುಖಾಮುಖಿ ಭೇಟಿ ಮಾಡಿ ಸುದ್ದಿಗೋಷ್ಠಿ ನಡೆಸೋದಾಗಿ ಟೀಮ್ ಹೇಳಿದೆ ಅಂತಾ ಸುದೀಪ್ ಹೇಳಿದ್ದಾರೆ.

ಸುದೀಪ್ ಹೇಳಿದ ಈ ಮಾತನ್ನ ಕೇಳುತ್ತಿದ್ರೆ ಪ್ರತಿಯೊಬ್ಬ ಕನ್ನಡಿಗರಿಗೂ ಹೆಮ್ಮೆಯಾಗೋದ್ರಲ್ಲಿ ಆಶ್ಚರ್ಯವೇನಿಲ್ಲ. ಕನ್ನಡದ ಒಬ್ಬ ಕಲಾವಿದನ ಕೀರ್ತಿ ಅದೆಷ್ಟು ದೊಡ್ಡ ಮಟ್ಟದಲ್ಲಿ ವ್ಯಾಪಿಸಿದೆ ಅನ್ನೋದಕ್ಕೆ ಇದೊಂದು ಉದಾಹರಣೆಯಾಗಿದೆ.

 

Comments

Leave a Reply

Your email address will not be published. Required fields are marked *