ಕಸಮುಕ್ತ ಬೆಂಗ್ಳೂರಿಗೆ ನೀಡಿದ್ದ ಡೆಡ್‍ಲೈನ್ ಇಂದು ಮುಕ್ತಾಯ – ಹೈಕೋರ್ಟ್ ಗೆ ಬಿಬಿಎಂಪಿ ಏನ್ ಹೇಳುತ್ತೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ಮುಕ್ತಗೊಳಿಸಲು ಹೈಕೋರ್ಟ್ ನೀಡಿದ್ದ ಡೆಡ್‍ಲೈನ್ ಇಂದಿಗೆ ಮುಗಿಯಲಿದೆ. ಆದ್ರೆ ಶೇ.100 ರಷ್ಡು ಸ್ವಚ್ಛ ಬೆಂಗಳೂರು ಮಾತ್ರ ಪಾಲಿಕೆಯಲ್ಲಿ ಸಾಧ್ಯವಾಗಿಲ್ಲ.

ರಾತ್ರಿ ಪಾಳಿಯಲ್ಲಿ ಪ್ರಹರಿ ವಾಹನ ಬಳಸಿ ನೈಟ್ ಬೀಟ್ ಮಾಡಿ ಬ್ಲಾಕ್ ಪಾಯಿಂಟ್ ತೆಗೆಸುವ ಯತ್ನ ನಡೆಯುತ್ತಿದೆ. ಇತ್ತ ಪಾಲಿಕೆ ಆರೋಗ್ಯಾಧಿಕಾರಿಗಳು ಸಹ ಸಾರ್ವಜನಿಕರಿಗೆ ಕಸ ಹಾಕದ ಬಗ್ಗೆ ಅರಿವು ಮೂಡಿಸಿ, ಎರಡನೇ ಬಾರಿ ಅದೇ ತಪ್ಪು ಮಾಡಿದ್ರೆ ಮಾತ್ರ 500 ರೂ ದಂಡ ಹಾಕುವ ಕ್ರಮಕ್ಕೆ ಮುಂದಾಗಿದ್ದಾರೆ.

ಕಸ ವಿಲೇವಾರಿ ವಿಚಾರಕ್ಕೆ ಸಂಬಂಧಿಸಿದಂತೆ ದೀಪಾವಳಿ ಹಬ್ಬಕ್ಕೂ ಮೊದಲೇ ಬೆಂಗಳೂರನ್ನು ಕಸ ಮುಕ್ತ ನಗರವನ್ನಾಗಿಸಿ ಎಂದು ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿತ್ತು. ಕಸ ವಿಲೇವಾರಿ ಕೋರಿ ನರಸಿಂಹಮೂರ್ತಿ ಸೇರಿ 11 ಜನರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿತ್ತು. ಬಿಬಿಎಂಪಿ ಪರ ವಾದಿಸಿದ ಹಿರಿಯ ವಕೀಲ ಪ್ರಶಾಂತ್ ರೆಡ್ಡಿ ಅವರು, ಈಗಾಗಲೇ ಬೆಂಗಳೂರು ನಗರವನ್ನು ಶೇ.95ರಷ್ಟು ಕಸ ಮುಕ್ತಗೊಳಿಸಲಾಗಿದ್ದು, ಶೇ.5ರಷ್ಟು ಮಾತ್ರ ಕಸ ವಿಲೇವಾರಿ ಆಗದೆ ಹಾಗೆಯೇ ಉಳಿದಿದೆ. ಇದನ್ನೂ 48 ಗಂಟೆಯಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಪೀಠಕ್ಕೆ ತಿಳಿಸಿದ್ದರು.

ಅರ್ಜಿದಾರರ ಪರ ವಾದಿಸಿದ ವಕೀಲರು, ನಗರದಲ್ಲಿ ಕಸ ಉಳಿದಿರುವ ಜಾಗವನ್ನು ಗುರುತಿಸಿ ಸ್ನೇಹಿತರು ನಮ್ಮ ಮೊಬೈಲ್‍ಗೆ ಫೋಟೋಗಳನ್ನು ಕಳುಹಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದ್ದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ದೀಪಾವಳಿ ಹಬ್ಬದ ಮುಂಚಿತವಾಗಿಯೇ ಬೆಂಗಳೂರು ನಗರವನ್ನು ಕಸ ಮುಕ್ತ ನಗರವನ್ನಾಗಿಸಿ ಎಂದು ಸೂಚಿಸಿ, ವಿಚಾಣೆಯನ್ನು ಇಂದಿಗೆ ಮುಂದೂಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *