ಸೀಟ್ ಬೆಲ್ಟ್ ಹಾಕದ್ದಕ್ಕೆ ಫೈನ್ ಕಟ್ಟಿದ ನಂತರವೂ ಟ್ರಾಫಿಕ್ ಪೊಲೀಸರಿಂದ ಥಳಿತ- ಬೆಂಕಿ ಹಚ್ಚಿಕೊಂಡ ಚಾಲಕ

ಚೆನ್ನೈ: ಸೀಟ್ ಬೆಲ್ಟ್ ಧರಿಸದ ವಿಚಾರಕ್ಕೆ ಸಂಬಂಧಿಸಿದಂತೆ ಸಂಚಾರಿ ಪೊಲೀಸರು ಥಳಿಸಿದ ಕಾರಣ 21 ವರ್ಷದ ಕ್ಯಾಬ್ ಚಾಲಕರೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.

ತಮಿಳುನಾಡಿನ ಶಂಕರನ್‍ಕೋವಿಲ್ ಮೂಲದ ಮಣಿಕಂದನ್ ಆತ್ಮಹತ್ಯೆಗೆ ಯತ್ನಿಸಿದ ಕ್ಯಾಬ್ ಚಾಲಕ. ಬುಧವಾರದಂದು ಮಣಿಕಂದನ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಶೇ.59ರಷ್ಟು ಸುಟ್ಟ ಗಾಯಗಳಾಗಿವೆ. ಸದ್ಯ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಮಣಿಕಂದನ್ ಸೀಟ್ ಬೆಲ್ಟ್ ಧರಿಸದೆ ಸಂಚಾರಿ ನಿಯಮ ಉಲ್ಲಂಘಿಸಿದ್ದು, ಅದಕ್ಕಾಗಿ ದಂಡ ಕಟ್ಟಿದ್ದಾರೆ. ಬಳಿಕ ಟ್ರಾಫಿಕ್ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ. ಪೊಲೀಸರ ದೌರ್ಜನ್ಯದ ಬಗ್ಗೆ ಮಣಿಕಂದನ್ ತನ್ನ ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸಲು ಯತ್ನಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪೊಲೀಸರು ನನಗೆ ಕಬ್ಬಿಣದ ರಾಡ್‍ನಿಂದ ಹೊಡೆದರು. ನನ್ನ ಲೈಸೆನ್ಸ್ ಕಸಿದುಕೊಂಡು, ನನ್ನ ಜಾತಿಯನ್ನ ಸೂಚಿಸಿ ನಿಂದಿಸಿದ್ರು. ನಾನು ಇದನ್ನ ಮೊಬೈಲ್‍ನಲ್ಲಿ ಸೆರೆಹಿಡಿದೆ. ಇದನ್ನ ವಾಟ್ಸಪ್ ಮತ್ತು ಯೂಟ್ಯೂಬ್‍ನಲ್ಲಿ ಅದ್ಹೇಗೆ ಹಾಕ್ತೀಯ ನೋಡ್ತೀವಿ ಎಂದು ಬೆದರಿಸಿದ್ರು ಎಂದು ಮಣಿಕಂದನ್ ಹೇಳಿದ್ದು, ಇದನ್ನ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಕಾರಿನಲ್ಲಿದ್ದ ಇಂಧನದ ಕ್ಯಾನ್ ತೆಗೆದುಕೊಂಡು ಮೈಮೇಲೆ ಸುರಿದು ಮಣಿಕಂದನ್ ಬೆಂಕಿ ಹಚ್ಚಿಕೊಂಡಿದ್ದಾರೆ.

ಮಣಿಕಂದನ್ ಗೆ ಚಿಕಿತ್ಸೆ ನೀಡಲು ವೈದ್ಯರ ತಂಡವನ್ನ ನಿಯೋಜಿಸಲಾಗಿದೆ. ಅವರು ಬದುಕುಳಿಯುತ್ತಾರೆಂದು ನಂಬಿದ್ದೇವೆ. ಸದ್ಯಕ್ಕೆ ಅವರು ಐಸಿಯು ನಲ್ಲಿದ್ದಾರೆ ಎಂದು ಡಾ. ಪಿ ವಸಂತಮಣಿ ಹೇಳಿದ್ದಾರೆ.

ಘಟನೆಯ ಬಳಿಕ ಸುಮಾರು 100 ಜನ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಚೆನ್ನೈ ಪೊಲೀಸ್ ಆಯುಕ್ತರಾದ ಎಕೆ ವಿಶ್ವನಾಥನ್ ಆಸ್ಪತ್ರೆಗೆ ಭೇಟಿ ನೀಡಿ ಚಾಲಕ ಮಣಿಕಂದನ್ ಆರೋಗ್ಯ ವಿಚಾರಿಸಿದ್ದಾರೆ. ಇದಕ್ಕೆ ಕಾರಣವಾದ ಪೊಲೀಸ್ ಸಿಬ್ಬಂದಿ ವಿರುದ್ಧ ಆರೋಪ ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *