ವಾಜಪೇಯಿ ಆರೋಗ್ಯ ವಿಚಾರದಲ್ಲಿ ಗೊಂದಲದ ಹೇಳಿಕೆ ನೀಡಿದ ರಾಜನಾಥ್ ಸಿಂಗ್ 

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಕ್ಷೀಣಿಸುತ್ತಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಗೊಂದಲವನ್ನು ಉಂಟು ಮಾಡಿದೆ.

ವಾಜಪೇಯಿ ಅವರ ಆರೋಗ್ಯ ವಿಚಾರಿಸಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಇಂದು ಬಿಜೆಪಿ ದೇಶದ ಸ್ಥಾಪಿಸುವರಲ್ಲಿ ಅಟಲ್ ಜೀ ಮೊದಲ ಸ್ಥಾನದಲ್ಲಿ ಬರುತ್ತಾರೆ. ಬಿಜೆಪಿ ಆಧಾರ ಸ್ತಂಭವಾಗಿದ್ದಂತಹ ಹಿರಿಯ ನಾಯಕ, ಮಾಜಿ ಪ್ರಧಾನಿಗಳು ಇಂದು ನಮ್ಮ ಮಧ್ಯೆಯಿಲ್ಲ. ಅವರಿಗೆ ಶ್ರದ್ಧಾಂಜಲಿ ಕೋರುತ್ತೇನೆ ಅಂತಾ ಹೇಳಿದರು. ಆದ್ರೆ ಆಸ್ಪತ್ರೆಯಿಂದ ಯಾವುದೇ ಅಧಿಕೃತ ಮಾಹಿತಿಗಳು ಬಹಿರಂಗಗೊಂಡಿಲ್ಲ.

ವಾಜಪೇಯಿ ಅವರ ಆರೋಗ್ಯದಲ್ಲಿ ನಿನ್ನೆ ಮತ್ತೆ ಏರುಪೇರಾಗಿದ್ದು, ಸ್ಥಿತಿ ಗಂಭೀರವಾಗಿರುವುದಾಗಿ ಏಮ್ಸ್ ಆಸ್ಪತ್ರೆ ಪ್ರಕಟಿಸಿತ್ತು. ಆದ್ರೆ ಇಂದು ಮತ್ತೆ ಅವರ ಸ್ಥಿತಿ ಗಂಭೀರವಾಗಿದ್ದು, ಗಣ್ಯಾತೀಗಣ್ಯರ ದಂಡೇ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿತ್ತು. ಮಾಜಿ ಪ್ರಧಾನಿಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಪ್ರದೇಶದಲ್ಲಿ ನಡೆಯುವ ಬಿಜೆಪಿಯ ಎಲ್ಲಾ ಚುನಾವಣಾ ಯಾತ್ರೆಗಳನ್ನು ರದ್ದು ಮಾಡಲಾಗಿತ್ತು. ಅಲ್ಲದೇ ಇಂದಿನ ಎಲ್ಲಾ ಬಿಜೆಪಿ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಪ್ರಧಾನಿ ಕಾರ್ಯಾಲಯ ಕೂಡ ಪ್ರಕಟಣೆ ಹೊರಡಿಸಿತ್ತು.

ಗ್ವಾಲಿಯರ್ ಮತ್ತು ಆಗ್ರಾದಲ್ಲಿರುವ ವಾಜಪೇಯಿ ಸಂಬಂಧಿಕರು ಶೀಘ್ರವೇ ಆಸ್ಪತ್ರೆಗೆ ಬರುವಂತೆ ಏಮ್ಸ್ ಸೂಚನೆ ನೀಡಿತ್ತು. ಈಗಾಗಲೇ ಆಸ್ಪತ್ರೆಗೆ ಆರೋಗ್ಯ ಸಚಿವ ಜೆ.ಪಿ ನಡ್ವಾ, ಎಲ್ ಕೆ ಅಡ್ವಾಣಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಅಮಿತ್ ಶಾ, ರಾಹುಲ್ ಗಾಂಧಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಆಸ್ಪತ್ರೆಯಲ್ಲಿ ವಾಜಪೇಯಿ ಕುಟುಂಬಸ್ಥರು ಈಗಾಗಲೇ ಜಮಾಯಿಸಿದ್ದು, ಕಣ್ಣೀರು ಹಾಕುತ್ತಿದ್ದಾರೆ.

ಆಸ್ಪತ್ರೆ ಬಳಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಬಿಜೆಪಿ ನಾಯಕರ ದಂಡೇ ಆಸ್ಪತ್ರೆಗೆ ಹರಿದುಬರುತ್ತಿದೆ. ಮಧುಮೇಹ, ಮೂತ್ರದ ಸೋಂಕು ಸೇರಿ ವಿವಿಧ ರೀತಿಯ ಅನಾರೋಗ್ಯದ ಕಾರಣ ಕಳೆದ ಜೂನ್ 11ರಂದು ವಾಜಪೇಯಿ ಏಮ್ಸ್ ಗೆ ದಾಖಲಾಗಿದ್ದರು. ವಾಜಪೇಯಿ ಆರೋಗ್ಯ ಇನ್ನಷ್ಟು ಕ್ಷೀಣಿಸಿದ್ದು, ಆಮ್ಲಜನಕದ ಬೆಂಬಲ ನೀಡಲಾಗುತ್ತಿದೆ ಎಂದು ಬುಧವಾರ ಏಮ್ಸ್ ಆಸ್ಪತ್ರೆ ತಿಳಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *