ಧರ್ಮ ಭೇದವಿಲ್ಲದೆ ಒಂದೇ ಕೊಠಡಿಯಲ್ಲಿ ಮಕ್ಕಳು ಮಾಡ್ತಾರೆ ಪೂಜೆ, ನಮಾಜ್

ಲಕ್ನೋ: ಜಾತಿ, ಧರ್ಮ ಎಂದು ಕಿತ್ತಾಡುವ ಜನರೇ ಹೆಚ್ಚಿರುವಾಗ, ಎಲ್ಲರೂ ಒಂದೇ ಎಂದು ಧರ್ಮ ಭೇದ ಮರೆತು ಒಂದೇ ಕೊಠಡಿಯಲ್ಲಿ ಹಿಂದೂ- ಮುಸ್ಲಿಂ ಮಕ್ಕಳು ಪೂಜೆ ಹಾಗೂ ನಮಾಜ್ ಮಾಡುವ ವಿಶೇಷ ಮದರಸವೊಂದು ಈಗ ಎಲ್ಲರ ಗಮನ ಸೆಳೆದಿದೆ.

ಹೌದು, ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಉತ್ತಮ ಉದಾಹರಣೆಯಾಗಿ ಉತ್ತರ ಪ್ರದೇಶದ ಅಲಿಗಢದ ಮದರಸಾ ಹೆಮ್ಮೆಯಿಂದ ತಲೆಯೆತ್ತಿ ನಿಂತಿದೆ. ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಪತ್ನಿ ಸಲ್ಮಾ ಅನ್ಸಾರಿ ಅಲನೂರ್ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ “ಚಾಚಾ ನೆಹರು ಮದರಸಾ” ಎಂಬ ಹೆಸರಿನಲ್ಲಿ ಈ ಮದರಸಾ ನಡೆಸಲಾಗುತ್ತಿದೆ.

ಇಲ್ಲಿ ಹಿಂದೂ ಮತ್ತು ಮುಸ್ಲಿಂ ಮಕ್ಕಳು ಒಂದೇ ಕೊಠಡಿಯಲ್ಲಿ ಪೂಜೆ ಸಲ್ಲಿಸಿ ಮತ್ತು ನಮಾಜ್ ಮಾಡುವುದೇ ವಿಶೇಷವಾಗಿದೆ. ಚಾಚಾ ನೆಹರು ಮದರಸಾದಲ್ಲಿ ಹಿಂದೂ-ಮುಸ್ಲಿಂ ಧರ್ಮದ 4 ಸಾವಿರ ವಿದ್ಯಾರ್ಥಿಗಳು ಓದುತ್ತಾರೆ. ಹೀಗಾಗಿ ಎರಡೂ ಧರ್ಮದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಮದರಸಾದಲ್ಲಿ ದೇವಸ್ಥಾನ ಮತ್ತು ಮಸೀದಿ ನಿರ್ಮಾಣಕ್ಕೆ ಸಲ್ಮಾ ಅನ್ಸಾರಿ ಮುಂದಾಗಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಲ್ಮಾ ಅನ್ಸಾರಿ ಅವರು, ನಮ್ಮ ಮದರಸಾದಲ್ಲಿ ಹಿಂದೂ-ಮುಸ್ಲಿಂ ಎರಡೂ ಧರ್ಮದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ದೇವರಿಗೆ ಪ್ರಾರ್ಥನೆ ಸಲ್ಲಿಸಲು ದೇಗುಲಕ್ಕೋ ಅಥವಾ ಮಸೀದಿಗೋ ಹೋದಾಗ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ನಾವು ಹೊಣೆಯಾಗುತ್ತೆವೆ. ಆದ್ದರಿಂದ ಮಕ್ಕಳ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಮದರಸಾದ ಒಳಗೆಯೇ ಮಸೀದಿ ಹಾಗೂ ದೇಗುಲ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಮ್ಮ ನಿರ್ಧಾರವನ್ನು ತಿಳಿಸಿದರು.

ಸದ್ಯ ಈ ಮದರಸಾದಲ್ಲಿ ಒಂದೇ ಕೊಠಡಿಯಲ್ಲಿ, ಹಿಂದೂ ಮಕ್ಕಳಿಗಾಗಿ ಸರಸ್ವತಿಯ ಪ್ರತಿಮೆಯೊಂದಿಗೆ ಹನುಮಾನ್ ಮತ್ತು ಶಿವನ ಚಿತ್ರವನ್ನು ಇರಿಸಿ ಪೂಜೆಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಹಾಗೆಯೇ ಅಲ್ಲೇ ಮುಸ್ಲಿಂ ಮಕ್ಕಳು ಕುರಾನ್ ಓದುತ್ತಾರೆ. ಇಲ್ಲಿನ ಮಕ್ಕಳು ಧರ್ಮ ಭೇದವನ್ನು ಅರಿತಿಲ್ಲ. ಎಲ್ಲರು ಒಂದೇ ಎಂದು ಪ್ರೀತಿಯಿಂದ ಇದ್ದಾರೆ.

ಮದರಸಾ ಅವರಣದಲ್ಲಿ ದೇವಾಲಯ ಮತ್ತು ಮಸೀದಿ ನಿರ್ಮಾಣ ಕಾರ್ಯ ಮುಗಿಯುವವರೆಗೆ ಮಕ್ಕಳು ಈ ಕೊಠಡಿಯಲ್ಲೇ ಪೂಜೆ ಸಲ್ಲಿಸುತ್ತಾರೆ ಮತ್ತು ನಮಾಜ್ ಮಾಡಲಿದ್ದಾರೆ.

Comments

Leave a Reply

Your email address will not be published. Required fields are marked *