ಕೊಡಗಿನಲ್ಲಿ ಮಳೆ – ಮದೆನಾಡು ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿತ

ಮಡಿಕೇರಿ: ಕೊಡಗಿನಲ್ಲಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಮತ್ತೆ ಗುಡ್ಡ ಕುಸಿತವಾಗಿದ್ದು, ರಾಷ್ಟ್ರೀಯ ಹೆದ್ದಾರಿ 275ರಲ್ಲಿ ರಸ್ತೆಗೆ ಮಣ್ಣು ಬಿದ್ದು ವಾಹನ ಸಂಚಾರಕ್ಕೆ ಸ್ವಲ್ಪ ಕಷ್ಟವಾಗುತ್ತಿದೆ.

ಮದೆನಾಡು ಬಳಿ ರಾತ್ರಿ 12 ಗಂಟೆಗೆ ಮೇಲೆ ಗುಡ್ಡ ಕುಸಿದಿದೆ. ಕಳೆದ ಬಾರಿ ಮದೆನಾಡು ಗ್ರಾಮದಲ್ಲಿ ಕುಸಿದಿದ್ದ ಗುಡ್ಡವೇ ಮತ್ತೆ ಕುಸಿದಿದೆ. ಆದ್ದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಗುಡ್ಡ ಕುಸಿದ ತೀವ್ರತೆಗೆ ವಿದ್ಯುತ್ ಕಂಬ ಬಾಗಿದೆ. ಅಲ್ಲದೆ ರಸ್ತೆಯ ಅರ್ಧ ಭಾಗ ಮಣ್ಣಿನಿಂದ ಆವೃತ ಹಿನ್ನೆಲೆ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ.

ಒಂದು ಭಾಗದಲ್ಲಿ ಮಾತ್ರ ಗುಡ್ಡ ಕುಸಿದಿದ್ದು ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ದೊಡ್ಡ ಸಮಸ್ಯೆಯಾಗಿಲ್ಲ. ಜೆಸಿಬಿ ಮೂಲಕ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡುರುವ ಹಿನ್ನೆಲೆ ಕೊಡಗು ಜಿಲ್ಲೆಯಾದ್ಯಂತ ಇಂದಿನಿಂದ ಜುಲೈ 24ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 204.4 ಮಿಮೀ ಮಳೆ ಬೀಳುವ ಸಾಧ್ಯತೆ ಇದೆ ಎಂಬ ಮಾಹಿತಿ ಇದ್ದು, ಸಾರ್ವಜನಿಕರು, ಪ್ರವಾಸಿಗರು ಎಚ್ಚರದಿಂದ ಇರಬೇಕು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದೆ. ಹಾಗೆಯೇ ಭಗಮಂಡಲ ವ್ಯಾಪ್ತಿಯಲ್ಲಿ ಕೊಂಚ ಮಳೆ ಕಡಿಮೆಯಾಗಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿವ ಹರಿವು ಇಳಿಮುಖಗೊಂಡಿದೆ.

Comments

Leave a Reply

Your email address will not be published. Required fields are marked *