ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಶಂಕಿತ ವ್ಯಕ್ತಿಯ ಓಡಾಟ- ಚೆಕ್ಕಿಂಗ್ ಕೌಂಟರ್‌ನಲ್ಲಿ ಹೈ ಸೆಕ್ಯೂರಿಟಿ

ಬೆಂಗಳೂರು: ಸೋಮವಾರ ರಾತ್ರಿ ಸಿಲಿಕಾನ್ ಸಿಟಿಯ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಹೈ ಸೆಕ್ಯೂರಿಟಿ ಚೆಕ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

ಸೋಮವಾರ ರಾತ್ರಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಬಂದ ವ್ಯಕ್ತಿಯೊಬ್ಬ ಮೆಟಲ್ ಡಿಟೆಕ್ಟರ್ ಬಳಿ ಹಾದು ಹೋದಾಗ ಸದ್ದಾಗಿದೆ. ಈ ವೇಳೆ ಆತನ ತಪಾಸಣೆ ಮಾಡಲು ಸೆಕ್ಯೂರಿಟಿ ಮುಂದಾಗಿದ್ದಾರೆ. ಆಗ ಆ ವ್ಯಕ್ತಿ ಎಸ್ಕೇಪ್ ಆಗಿದ್ದಾನೆ. ಆದ್ದರಿಂದ ಮೆಟ್ರೋ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣಕ್ಕೆ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ. ಅಲ್ಲದೆ ಶಂಕಿತ ವ್ಯಕ್ತಿಯನ್ನು ಸೆರೆಹಿಡಿಯಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಮುಂಜಾಗೃತ ಕ್ರಮವಾಗಿ ಮೆಟ್ರೋ ನಿಲ್ದಾಣದಲ್ಲಿ ಹೈ ಸೆಕ್ಯೂರಿಟಿ ಹಾಗೂ ಪ್ರಯಾಣಿಕರ ಫುಲ್ ಚೆಕ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ಜನರ ಬ್ಯಾಗ್‍ಗಳನ್ನು ನಿಲ್ದಾಣದ ಹೊರಗಡೆಯಿಂದಲೇ ಭದ್ರತಾ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದಾರೆ. ಜೊತೆಗೆ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿ ಪೊಲೀಸರಿಂದ ಹೈ ಸೆಕ್ಯೂರಿಟಿ ನೀಡಲಾಗುತ್ತದೆ.

ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟವಾದ ಹಿನ್ನೆಲೆ ದೇಶದಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುನ್ನೇಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಬೆಂಗಳೂರಿಗೆ ಉಗ್ರರು ಬಂದಿಳಿದಿದ್ದಾರೆ ಐಟಿ ಕಂಪನಿಗಳ ಮೇಲೆ ದಾಳಿ ನಡೆಸಲು ತಯಾರಿ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಭಾನುವಾರದಂದು ಬೆಂಗಳೂರು ಸಿಟಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದರು.

Comments

Leave a Reply

Your email address will not be published. Required fields are marked *