ಹೈಕಮಾಂಡ್ ಕಂಟ್ರೋಲ್ – ಶಾ ಷರತ್ತು ಒಪ್ಪಿದ ಬಿಎಸ್‍ವೈ

ಬೆಂಗಳೂರು: ಈ ಬಾರಿಯೂ ಸಂಪುಟದಲ್ಲಿ ಆಪ್ತರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಆಸೆ ಪಟ್ಟಿದ್ದ ಯಡಿಯೂರಪ್ಪನವರ ಆಸೆಗೆ ಹೈಕಮಾಂಡ್ ಬ್ರೇಕ್ ಹಾಕಿದೆ.

ದೆಹಲಿ ಭೇಟಿ ಸಂದರ್ಭದಲ್ಲಿ ಯಡಿಯೂರಪ್ಪ ಹಲವು ಶಾಸಕರ ಪಟ್ಟಿಯನ್ನು ಅಮಿತ್ ಶಾ ಕೈಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಮಿತ್ ಶಾ ಯಡಿಯೂರಪ್ಪನವರೇ ನೀವು ಹೇಳಿದವರ ಪಟ್ಟಿಯನ್ನು ಫೈನಲ್ ಮಾಡಲು ಸಾಧ್ಯವಿಲ್ಲ. ನಾನು ಹೇಳಿದವರನ್ನು ಮಂತ್ರಿ ಮಾಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಬಿಎಸ್‍ವೈ ಅದು ಹಾಗಲ್ಲ. ನನ್ನನ್ನು ನಂಬಿದ ಆಪ್ತ ಶಾಸಕರಿದ್ದಾರೆ ಎಂದು ತಿಳಿಸಿದ್ದಾರೆ.

ಯಡಿಯೂರಪ್ಪನವರಿಂದ ಈ ಉತ್ತರ ಬಂದ ಕೂಡಲೇ ಅಮಿತ್ ಶಾ, ನಿಮಗೆ ಈಗ ಚುನಾವಣೆ ಬೇಕೇ? ಸರ್ಕಾರ ಬೇಕೇ ಎಂದು ಪ್ರಶ್ನೆ ಕೇಳಿದ್ದಾರೆ. ಈಗ ಚುನಾವಣೆ ಬೇಕೆಂದರೆ ಸಂಪುಟದಲ್ಲಿ ಆಪ್ತರಿಗೆ ಮಣೆ ಹಾಕಿ. ಹರ್ಯಾಣ, ಮಹಾರಾಷ್ಟ್ರ ಜೊತೆಗೆ ಕರ್ನಾಟಕದಲ್ಲೂ ಚುನಾವಣೆ ನಡೆಯಲಿ. ಸುಭದ್ರ ಸರ್ಕಾರ ಬೇಕಿದ್ದರೆ ಆಪ್ತರನ್ನ ಕೈ ಬಿಟ್ಟು ನಮ್ಮ ಮಾತನ್ನು ಪಾಲಿಸಿ ಎಂದು ಸೂಚಿಸಿದ್ದಾರೆ. ಹೈಕಮಾಂಡಿನ ಈ ಷರತ್ತಿಗೆ ಬಿಎಸ್‍ವೈ ಒಪ್ಪಿಗೆ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಲಿಂಗಾಯತ ಶಾಸಕರಾದ ಶಿಗ್ಗಾಂವಿಯ ಬಸವರಾಜ ಬೊಮ್ಮಾಯಿ, ಬೀಳಗಿಯ ಮುರುಗೇಶ್ ನಿರಾಣಿ, ಹಾನಗಲ್ ಉದಾಸಿ, ವಿಜಯಪುರ ಬಸನಗೌಡ ಪಾಟೀಲ್ ಯತ್ನಾಳ್, ಹೊನ್ನಾಳಿಯ ರೇಣುಕಾಚಾರ್ಯ, ಒಕ್ಕಲಿಗ ಶಾಸಕರಾದ ಸಿಟಿ ರವಿ, ವಿರಾಜಪೇಟೆಯ ಬೋಪಯ್ಯ, ವಾಲ್ಮೀಕಿ ಸಮುದಾಯ ಶಿವನಗೌಡ ನಾಯಕ್, ಬ್ರಾಹ್ಮಣ ಸಮುದಾಯದ ಕೃಷ್ಣರಾಜದ ರಾಮದಾಸ್ ಅವರಿಗೆ ಮಂತ್ರಿಸ್ಥಾನ ನೀಡಲು ಯಡಿಯೂರಪ್ಪ ಮುಂದಾಗಿದ್ದರು ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *