ಉಗ್ರರಿಂದ ದಾಳಿ ಭೀತಿ- ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಮಿಲಿಟರಿ ಸೆಕ್ಯೂರಿಟಿ

ಬೆಂಗಳೂರು: ಉಗ್ರರರಿಂದ ದಾಳಿ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ಮಿಲಿಟರಿ ಸೆಕ್ಯೂರಿಟಿ ಒದಗಿಸಲಾಗಿದೆ.

ಮೆಟ್ರೋ ಪ್ರವೇಶಿಸುವ ಪ್ರತಿ ಪ್ರಯಾಣಿಕರಿಗೂ ಮೆಟ್ರೋ ಸೆಕ್ಯೂರಿಟಿ ಸಿಬ್ಬಂದಿ ಪ್ರತ್ಯೇಕ ತಪಾಸಣೆ ಮಾಡುತ್ತಿದ್ದಾರೆ. ಪ್ರಯಾಣಿಕರ ಮೊಬೈಲ್, ಪರ್ಸ್‍ಗಳನ್ನು ಚೆಕ್ ಮಾಡಿ ಬಳಿಕ ಒಳಗೆ ಪ್ರವೇಶ ನೀಡುತ್ತಿದ್ದಾರೆ. ಜೊತೆಗೆ ಮರಳಿನ ಮೂಟೆಯಿಂದ ಸೆಕ್ಯೂರಿಟಿ ವಾಲ್‍ಗಳನ್ನು ಕೂಡ ನಿಲ್ದಾಣದ ಬಳಿ ನಿರ್ಮಾಣ ಮಾಡಲಾಗಿದೆ.

ಇತ್ತ ವಿಧಾನಸೌಧಕ್ಕೂ ಕೂಡ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ವಿಧಾನಸೌಧದ ಎಲ್ಲಾ ಗೇಟ್‍ಗಳಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಿದೆ. ವಿಧಾನಸೌಧದ ಒಳಗೆ ಹೋಗುವವರ ತಪಾಸಣೆ ಮಾಡಿ ಬಳಿಕ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಸದ್ಯ ಖಾಕಿ ಸರ್ಪಗಾವಲಿನಲ್ಲಿ ವಿಧಾನಸೌಧ ಇದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನ ಪ್ರವೇಶ ದ್ವಾರದ ಮುಂದೆಯೇ ನಿಲ್ಲಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಹಾಗೆಯೇ ವಿಧಾನಸೌಧದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರನ್ನೂ ತಪಾಸಣೆ ಮಾಡಿಯೇ ಭದ್ರತಾ ಸಿಬ್ಬಂದಿ ಒಳಗೆ ಕಳುಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳ ತಪಾಸಣಾ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಪಿಜಿ, ಹಾಸ್ಟೆಲ್‍ಗಳ ಮೇಲೆ ಕೂಡ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.  ಎಲ್ಲಾ ಅಧಿಕಾರಿಗಳು ಗಸ್ತು ತಿರುಗುತ್ತಿದ್ದು, ಹಲವು ದಿನಗಳಿಂದ ನಿಂತಲ್ಲೇ ನಿಂತಿರೋ ವಾಹನಗಳ ತೆರವುಗೊಳಿಸಲಾಗಿದೆ. ಹಾಗೆಯೇ ದೇವಸ್ಥಾನ, ಮಸೀದಿ, ಮಾಲ್, ಹಾಸ್ಪಿಟಲ್, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೇಲೂ ನಿಗಾವಹಿಸಲಾಗಿದೆ. ಅಲ್ಲದೆ ನಗರದ ಲಾಡ್ಜ್‍ಗಳಲ್ಲಿ ದಾಖಲೆಗಳನ್ನ ನೀಡದೆ ತಂಗಿರುವವರ ವಿಚಾರಣೆ ಮಾಡಲಾಗುತ್ತಿದೆ.

ತಡರಾತ್ರಿವರೆಗೆ ಪೊಲೀಸರಿಂದ ನಾಕಾಬಂದಿ ಹಾಕಿ ಕಾರ್ಯಾಚರಣೆ ನಡೆದಿದ್ದು, ಅಪರಿಚಿತ ಕಾರು ಅನುಮಾನಸ್ಪಾದವಾಗಿ ಓಡಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮೂರು ಮಂದಿಯನ್ನು ಪೂರ್ವ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ರಾತ್ರಿ ಇಂದಿರಾನಗರದ ಬಳಿ ಪೊಲೀಸರು ಅನುಮಾನಸ್ಪಾದವಾಗಿ ಓಡಾಟ ನಡೆಸುತ್ತಿದ್ದ ಪ್ರವೀಣ್, ಸಂತೋಷ್, ಸಂಜಯ್‍ರನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಐ.ಬಿ. ಅಧಿಕಾರಿಗಳಿಂದಲೂ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.

ವಿಚಾರಣೆ ವೇಳೆ ಕೋಲಾರ ತಾಲೂಕಿನ ಕೈವಾರದಲ್ಲಿ ಅಪಘಾತ ಮಾಡಿ ಬೆಂಗಳೂರಿಗೆ ಬಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ಪೂರ್ವ, ಕೇಂದ್ರ ವಿಭಾಗದ ಡಿಸಿಪಿಗಳಿಂದ ವಿಚಾರಣೆ ಮುಂದುವರಿದಿದೆ.

ಕೇಂದ್ರ ಗುಪ್ತಚರ ಇಲಾಖೆ ಸೂಚನೆ ಮೇರೆಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ 370ನೇ ವಿಧಿ ರದ್ದು ಮಾಡಿದ ಬಳಿಕ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಬಹುದು ಎಂಬ ಆತಂಕ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ನಗರಗಳನ್ನೇ ಉಗ್ರರು ಟಾರ್ಗೆಟ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ರಾಜಧಾನಿಯಲ್ಲಿ, ಪೊಲೀಸರು ಅಲರ್ಟ್ ಆಗಿರುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಸೂಚನೆ ನೀಡಿದ್ದಾರೆ. ಹೀಗಾಗಿ ರಾಜಧಾನಿಯ ರೈಲ್ವೆ, ಬಸ್ ನಿಲ್ದಾಣ, ಮೆಟ್ರೋ, ಮಾಲ್, ಮಾರುಕಟ್ಟೆ, ದೇವಸ್ಥಾನ, ಮಸೀದಿ, ವಿಧಾನಸೌಧ, ವಿಕಾಸಸೌಧ, ಹೈಕೋಟ್9, ಸೇರಿ ಹಲವಡೆ ಖಾಕಿ ಕಟ್ಟೆಚ್ಚರ ವಹಿಸಿದೆ.

Comments

Leave a Reply

Your email address will not be published. Required fields are marked *