ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಹೈ ಅಲರ್ಟ್, ಎಲ್ಲೆಡೆ ಸಿಸಿಟಿವಿ ಕಣ್ಗಾವಲು!

ಚಿಕ್ಕಬಳ್ಳಾಪುರ: ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟಿಸಿದಂತೆ ರಾಜ್ಯದಲ್ಲಿ ಭಯೋತ್ಪಾದಕರು ಬಾಂಬ್ ದಾಳಿ ನಡೆಸಿ ಅಟ್ಟಹಾಸ ಮೆರೆಯುವ ಮುನ್ಸೂಚನೆ ಸಿಕ್ಕಿರೋದರಿಂದ ರಾಜ್ಯ ಪೊಲೀಸ್ ಇಲಾಖೆ ಪ್ರಮುಖ ಸ್ಥಳಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಹೈ ಅಲರ್ಟ್ ಘೋಷಿಸಿದೆ.

ಭಯೋತ್ಪಾದಕರ ದಾಳಿ ಮುನ್ಸೂಚನೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲೂ ಸಹ ಹೈ ಅಲರ್ಟ್ ಘೋಷಿಸಲಾಗಿದ್ದು ಎಲ್ಲೆಡೆ ಸಿಸಿ ಟಿವಿ ಆಳವಡಿಸಿಲಾಗಿದೆ. ವಿಶ್ವವಿಖ್ಯಾತ ಪ್ರವಾಸಿತಾಣ ನಂದಿಗಿರಿಧಾಮಕ್ಕೆ ಬರುವ ದೇಶ-ವಿದೇಶಿ ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ. ಹಾಗೆ ನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸೋ ಬಡವರ ಊಟಿ ನಂದಿಗಿರಿಧಾಮದಲ್ಲಿ ಸದ್ಯ ಹೆಚ್ಚುವರಿಯಾಗಿ 36 ಕಡೆ ನೂತನವಾಗಿ ಸಿಸಿಟಿವಿ ಆಳವಡಿಸಿ ನಿಗಾ ವಹಿಸಲಾಗ್ತಿದೆ.

ಇದಷ್ಟೇ ಅಲ್ಲದೆ ನಂದಿಬೆಟ್ಟದ ತಪ್ಪಲಿನಲ್ಲಿ ಇರೋ ನಂದಿ ಗ್ರಾಮದ ಐತಿಹಾಸಿಕ ಶ್ರೀ ಭೋಗನಂದೀಶ್ವರ ದೇವಾಲಯಕ್ಕೂ ಸಾಕಷ್ಟು ಪ್ರಮಾಣದಲ್ಲಿ ಭಕ್ತರು ಹರಿದು ಬರುವ ಕಾರಣಕ್ಕೆ ದೇವಾಲಯದ 16 ಕಡೆ ಸಿಸಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ರಜಾ ದಿನಗಳಲ್ಲಿ ನಂದಿಗಿರಿಧಾಮ ಹಾಗೂ ಭೋಗನಂದೀಶ್ವರ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರು ಆಗಮಿಸೋದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಸಿಸಿ ಕ್ಯಾಮೆರಾ ಅಳವಡಿಸಿ ನಿಗಾ ವಹಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಾರ್ಯ ಕೈಗೊಂಡಿದೆ.

ಅಲ್ಲದೆ ಸ್ಥಳದಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಹಾಗೂ ಅನುಮಾನಸ್ಪದ ವಸ್ತುಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಪ್ರವಾಸಿಗರಿಗೂ ಹಾಗೂ ನಂದಿಗಿರಿಧಾಮದ ದೇವಾಲಯದ ಸಿಬ್ಬಂದಿಗೂ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *