ವಿಚಿತ್ರ ಬೌಲಿಂಗ್‍ನಿಂದ ವಿಕೆಟ್ ಪಡೆದು ಪ್ರೇಕ್ಷಕರ ಹುಬ್ಬೇರಿಸಿದ ಅಶ್ವಿನ್!- ವಿಡಿಯೋ

ತಿರುನೆಲ್ವೇಲಿ: ಟೀಂ ಇಂಡಿಯಾ ಸೀಮಿತ ಓವರ್ ಗಳ ತಂಡದಿಂದ ಹೊರಗುಳಿದಿರುವ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೆ ತಮ್ಮ ವಿಶಿಷ್ಟ ಶೈಲಿಯ ಬೌಲಿಂಗ್ ಮೂಲಕ ಪ್ರೇಕ್ಷಕರ ಹುಬ್ಬೇರಿಸಿದ್ದಾರೆ.

ಆರ್.ಅಶ್ವಿನ್ ಸದ್ಯ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‍ಪಿಎಲ್)ನಲ್ಲಿ ದಿಂಡಿಗಲ್ ಡ್ರ್ಯಾಗನ್ಸ್ ಪರ ಆಡುತ್ತಿದ್ದಾರೆ. ಸೋಮವಾರ ನಡೆದ ಮಧುರೈ ಪ್ಯಾಂಥರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿಚಿತ್ರ ಬೌಲಿಂಗ್ ಮಾಡಿ ವಿಕೆಟ್ ಪಡೆದಿದ್ದಾರೆ. ಅಶ್ವಿನ್ ಅವರ ವಿಶಿಷ್ಟ ಬೌಲಿಂಗ್ ಶೈಲಿಯ ವಿಡಿಯೋ ಸಖತ್ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.

https://twitter.com/SriniMaama16/status/1153360508566659072

ದಿಂಡಿಗಲ್ ಡ್ರ್ಯಾಗನ್ಸ್ ವಿರುದ್ಧ ಪಂದ್ಯದಲ್ಲಿ ಗೆಲುವು ಸಾಧಿಸಲು ಮಧುರೈ ತಂಡವು ಕೊನೆಯ ಓವರಿನಲ್ಲಿ 32 ರನ್‍ಗಳನ್ನು ಗಳಿಸಬೇಕಿತ್ತು. ಈ ವೇಳೆ ದಿಂಡಗಲ್ ಪರ ಕೊನೆಯ ಓವರ್ ಬೌಲಿಂಗ್ ಮಾಡಿದ ಆರ್.ಅಶ್ವಿನ್ ತಮ್ಮ ವಿಚಿತ್ರ ಬೌಲಿಂಗ್ ಪ್ರಯೋಗ ಮಾಡಿದ್ದಾರೆ. ಬ್ಯಾಟ್ಸ್ ಮ್ಯಾನಿಗೆ ಬಾಲ್ ಕಾಣಿಸದಂತೆ ಹಿಂದಕ್ಕೆ ಹಿಡಿದುಕೊಂಡು ಓಡಿಕೊಂಡು ಬಂದು ಬೌಲಿಂಗ್ ಮಾಡಿದ್ದಾರೆ. ಈ ಮೂಲಕ ಕೊನೆಯ ಓವರ್ ನಲ್ಲಿ ಕೇವಲ 2 ರನ್‍ಗಳನ್ನು ನೀಡಿ 2 ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಟಿಎನ್‍ಪಿಎಲ್‍ನಲ್ಲಿ ಶುಕ್ರವಾರ ನಡೆದ ಸೂಪರ್ ಗಲ್ಲಿಸ್ ವಿರುದ್ಧ ನಡೆದ ಪಂದ್ಯದಲ್ಲಿಯೂ ವಿಶಿಷ್ಟ ಶೈಲಿಯ ಬೌಲಿಂಗ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಆರ್.ಅಶ್ವಿನ್ ಪ್ರಸಕ್ತ ಸಾಲಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿದ್ದರು. ಈ ವೇಳೆ ಮಂಕಡ್ ಶೈಲಿಯ ರನೌಟ್ ಮಾಡುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

ಬಳಿಕ ಏಕದಿನ ವಿಶ್ವಕಪ್ ವೇಳೆಯಲ್ಲಿ ಇಂಗ್ಲೆಂಡ್‍ನಲ್ಲಿ ಕೌಂಟಿ ಕ್ರಿಕೆಟ್‍ನಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಟಿಎನ್‍ಪಿಎಲ್ ಕ್ರಿಕೆಟ್‍ಗೆ ಮರಳಿದ್ದು, ತಮ್ಮ ಬೌಲಿಂಗ್ ಶೈಲಿಯ ಮೂಲಕ ಸುದ್ದಿಯಾಗುತ್ತಿದ್ದಾರೆ. ಸದ್ಯದಲ್ಲಿಯೇ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಅಶ್ವಿನ್ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಆಡಲಿದ್ದಾರೆ.

https://twitter.com/lafdebaazz/status/1153371686152130561

Comments

Leave a Reply

Your email address will not be published. Required fields are marked *