ಅಂದು ದೀಪಿಕಾಗೆ ಬೆದರಿಕೆಗಳು ಬಂದಾಗ ಪ್ರತಿಕ್ರಿಯೆ ಯಾಕೆ ನೀಡಿಲ್ಲ ಎಂಬ ಪ್ರಶ್ನೆಗೆ ರಣ್‍ವೀರ್ ಉತ್ತರ ಹೀಗಿತ್ತು

ಮುಂಬೈ: ಬಾಲಿವುಡ್‍ನ ಪದ್ಮಾವತ್ ಸಿನಿಮಾ ಎಲ್ಲ ವಿವಾದಗಳಿಂದಲೂ ಮುಕ್ತಿ ಪಡೆದು ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಅಭೂತಪೂರ್ವ ಯಶಸ್ಸನ್ನು ಪಡೆದುಕೊಂಡಿದೆ. ಸಿನಿಮಾದ ಬಿಡುಗಡೆಗೂ ಮುನ್ನ ಚಿತ್ರದ ನಟಿ ದೀಪಿಕಾ ಪಡುಕೋಣೆ ಅವರಿಗೆ ಹಲವು ಬೆದರಿಕೆ ಕರೆಗಳು ಬಂದಿದ್ದವು. ಆದ್ರೆ ರಣ್‍ವೀರ್ ಸಿಂಗ್ ಸೇರಿದಂತೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಈಗ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಣ್‍ವೀರ್ ಅಂದಿನ ಮೌನಕ್ಕೆ ಉತ್ತರ ನೀಡಿದ್ದಾರೆ.

ಚಿತ್ರ ರಿಲೀಸ್ ಮುನ್ನ ಕರ್ಣಿ ಸೇನಾ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಸೆನ್ಸಾರ್ ಮಂಡಳಿಯ ನಿರ್ದೇಶನದ ಮೇರೆಗೆ ಚಿತ್ರದಲ್ಲಿ ಹಲವು ಬದಲಾವಣೆ ಮತ್ತು ಕೆಲ ದೃಶ್ಯಗಳಿಗೆ ಕತ್ತರಿ ಹಾಕಿ ಬಿಡುಗಡೆ ಮಾಡಲಾಯಿತು. ಈ ಎಲ್ಲಾ ವಿವಾದಗಳ ನಡುವೆ ನಟಿ ದೀಪಿಕಾ ಪಡುಕೋಣೆಗೆ ಮೂಗು ಕತ್ತರಿಸಿ, ಶಿರಚ್ಛೇದಿಸುವುದಾಗಿ ಬೆದರಿಕೆ ಹಾಕಿದ್ದರು. ದೀಪಿಕಾ ಅವರ ಈ ಬೆದರಿಕೆಯ ವಿಚಾರವಾಗಿ ರಣ್‍ವೀರ್ ಸಿಂಗ್ ಯಾವುದೇ ಹೇಳಿಕೆ ನೀಡದಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತ್ತು.

ಮೌನ ಮುರಿದ ರಣ್‍ವೀರ್: ಸಿನಿಮಾ ಬಿಡುಗಡೆ ವೇಳೆ ದೀಪಿಕಾಗೆ ಬೆದರಿಕೆಗಳು ಬಂದಾಗ ಸಹಜವಾಗಿಯೇ ಕೋಪ ಬಂದಿತ್ತು. ಆದ್ರೆ ನಾನು ನಿರ್ಮಾಪಕರು ಹಾಗೂ ನಿರ್ದೇಶಕರು ನೀಡಿದ ಕಟ್ಟುನಿಟ್ಟಾದ ಸೂಚನೆಯನ್ನು ನಾನು ಮೀರುವಂತಿರಲಿಲ್ಲ. ಇಂತಹ ಸಮಯದಲ್ಲಿ ಜನರು ತಿಳಿದು ಅಥವಾ ತಿಳಿಯದೆನೋ ವಿವಾದಗಳನ್ನು ಸೃಷ್ಟಿ ಮಾಡಿರುತ್ತಾರೆ. ಒಂದು ವೇಳೆ ನಾನು ಯಾವುದೇ ರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದರೆ ಅದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗುತಿತ್ತು. ಈ ಕಾರಣಕ್ಕಾಗಿ ಯಾವುದೇ ಹೇಳಿಕೆಯನ್ನು ನೀಡಲಿಲ್ಲ ಎಂದು ತಿಳಿಸಿದರು

ಈ ಸಿನಿಮಾದ ವಿವಾದ ನಿರ್ಮಾಪಕರು ಹಾಗೂ ನಿರ್ದೇಶಕರ ಜೀವನವನ್ನು ನಿರ್ಧಾರ ಮಾಡುವಂತದಾಗಿತ್ತು. ನನ್ನ ನಿಲುವು ಮತ್ತು ಪ್ರತಿಕ್ರಿಯೆ ಅವರಿಗೆ ಯಾವುದೇ ಹಾನಿಯನ್ನುಂಟು ಮಾಡಬಾರದೆಂದು ನಾನು ಸುಮ್ಮನಿದ್ದೆ. ಅವರು ಕೊಟ್ಟ ಆದೇಶದಂತೆ ನಾನು ನಡೆದುಕೊಂಡಿದ್ದೇನೆ ಎಂದು ತಿಳಿಸಿದರು.

ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯ ಶಿರಚ್ಛೇದ ಮಾಡಿದವರಿಗೆ 10 ಕೋಟಿ ರೂ. ಬಹುಮಾನ ನೀಡುತ್ತೇವೆ ಎಂದು ಹರಿಯಾಣದ ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥ ಸೂರಜ್ ಪಾಲ್ ಅಮು ಹೇಳಿದ್ದರು.

Comments

Leave a Reply

Your email address will not be published. Required fields are marked *