ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಕಿಚ್ಚು – ಗುಬ್ಬಿಯಲ್ಲಿ ಪೊಲೀಸ್‌ ಸರ್ಪಗಾವಲು, ರಾಮನಗರಕ್ಕೆ ನೀರು ಹರಿಸಲು ರೈತರ ವಿರೋಧ

– ರಸ್ತೆ ತಡೆದು ಪ್ರತಿಭಟನೆ, ಆಕ್ರೋಶ

ತುಮಕೂರು: ನಗರದಲ್ಲಿ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ (Hemavathi Express Canal Link) ವಿವಾದ ಭುಗಿಲೆದ್ದಿದೆ. ಕುಣಿಗಲ್ ಹೊರತುಪಡಿಸಿ ಜಿಲ್ಲೆಯ ಉಳಿದ ಭಾಗಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ಕಾರವು ವಿವಾದ ಬಗೆಹರಿಸದೇ ಕಾಮಗಾರಿ ಮುಂದುವರೆಸಲು ಮುಂದಾಗಿದ್ದು, ಪ್ರತಿಭಟನೆಗೆ (Protest) ಅವಕಾಶವಿಲ್ಲದಂತೆ ನಿಷೇಧಾಜ್ಞೆ ಹೇರಲಾಗಿದೆ.

ಇಂದು ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಸಾವಿರಾರು ರೈತರೂ (Farmers) ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. 144 ಸೆಕ್ಷನ್‌ ನಿಷೇಧಾಜ್ಞೆ ಹೊರತಾಗಿಯೂ ರೈತರ ಆಕ್ರೋಶ ಮುಂದುವರಿದಿದೆ. ಹೀಗಾಗಿ ಗುಬ್ಬಿ, ನಿಟ್ಟೂರು ಸೇರಿದಂತೆ ಹಲವೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿದೆ. 10 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, 4 ಡಿವೈಎಸ್‌ಪಿ, 23 ಇನ್ಸ್‌ಪೆಕ್ಟರ್‌ ಸಹಿತ 900 ಪೊಲೀಸರ ನಿಯೋಜನೆ ಮಾಡಲಾಗಿದೆ.

10ಕ್ಕೂ ಹೆಚ್ಚು ಪ್ರತಿಭಟನಾಕಾರರು ವಶಕ್ಕೆ:
ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ವಿರೋಧಿಸಿ ಪ್ರತಿಭಟನೆಗೂ ಮುನ್ನವೇ ಪ್ರತಿಭಟನಾಕಾರರನ್ನ ವಶಕ್ಕೆ ಪಡೆಯುವ ಕೆಲಸ ಪೊಲೀಸರು ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ ಸುರೇಶ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ 10ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನ ಗುಬ್ಬಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಮನಗರಕ್ಕೆ ನೀರು ಹರಿಸಲು ವಿರೋಧ:
ಇನ್ನೂ ಕೆನಾಲ್‌ ಯೋಜನೆ ಮೂಲಕ ರಾಮನಗರಕ್ಕೆ ನೀರು ಹರಿಸಲು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಗುಬ್ಬಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನ ಹೊತ್ತೊಯ್ಯಲು ತಂದಿದ್ದ ಸಾರಿಗೆ ಬಸ್‌ ಚಕ್ರಗಳ ಗಾಳಿ ತೆಗೆದು ಆಕ್ರೋಶ ಹೊರಹಾಕಿದ್ದಾರೆ. ಬಸ್ಸನ್ನ ಮಗುಚಿಹಾಕಲೂ ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಶಿವಮೊಗ್ಗೆ-ಬೆಂಗಳೂರು ಹೆದ್ದಾರಿಯಲ್ಲಿ ನಡೆದುಕೊಂಡೇ ನಾಲೆಯತ್ತ ಹೊರಟಿದ್ದಾರೆ. ಪ್ರತಿಭಟನಾಕಾರರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.