ಇಡಿ ಅಧಿಕಾರಿಗಳ ವಿರುದ್ಧ SC/ST ಕಾಯ್ದೆಯಡಿ ಹೇಮಂತ್‌ ಸೋರೆನ್‌ FIR

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ (Hemant Soren) ಅವರು ಜಾರಿ ನಿರ್ದೇಶನಾಲಯದ (ED)ಅಧಿಕಾರಿಗಳ ವಿರುದ್ಧವೇ ಇದೀಗ ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಕುರಿತು ರಾಂಚಿ ಪೊಲೀಸರು ಕೂಡ ಖಚಿತಪಡಿಸಿದ್ದಾರೆ.

ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಸೋಮವಾರ ಅಧಿಕಾರಿಗಳು ದಾಳಿ ನಡೆಸಿದ್ದರ ಕುರಿತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ರಾಂಚಿಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಭಾರತ್‌ ಜೋಡೊ ನ್ಯಾಯ ಯಾತ್ರೆ ವೇಳೆ ರಾಹುಲ್‌ ಗಾಂಧಿ ಕಾರಿನ ಗಾಜು ಪುಡಿಪುಡಿ

ಭೂ ವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ವಿಚಾರಣೆಗೆ ಒಳಪಡಿಸಲು ಇಡಿ ತಂಡ ಸೋಮವಾರ ದೆಹಲಿಯಲ್ಲಿರುವ ಸೋರೆನ್ ಅವರ ನಿವಾಸಕ್ಕೆ ಭೇಟಿ ನೀಡಿತ್ತು. ಆದರೆ ಈ ವೇಳೆ ಸೋರೆನ್‌ ಅವರು ಮನೆಯಲ್ಲಿ ಇರಲಿಲ್ಲ. ಇಡಿ ತಂಡವು ಸುಮಾರು 13 ಗಂಟೆಗಳ ಕಾಲ ಅವರ ನಿವಾಸದಲ್ಲಿ ಬೀಡುಬಿಟ್ಟಿತು. ಶೋಧ ನಡೆಸುವ ಸಮಯದಲ್ಲಿ 36 ಲಕ್ಷ ರೂ. ನಗದು ಮತ್ತು ದಾಖಲೆಗಳು ಸಿಕ್ಕಿವೆ ಎಂದು ಹೇಳಲಾಗಿದೆ.

ಸೋರೆನ್ ಅವರ ನಿವಾಸದಿಂದ ತನಿಖಾ ಸಂಸ್ಥೆ ಐಷಾರಾಮಿ ಎಸ್‌ಯುವಿಯನ್ನು ವಶಪಡಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಹೇಮಂತ್ ಸೋರೆನ್ ಅವರು ರಾಂಚಿಯ ಪೊಲೀಸ್ ಠಾಣೆಯಲ್ಲಿ ಕಪಿಲ್ ರಾಜ್ ಮತ್ತು ತನಿಖಾಧಿಕಾರಿ ದೇವ್ರತ್ ಝಾ ಸೇರಿದಂತೆ ಐವರು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ..?: ಜನವರಿ 27 ಮತ್ತು 28 ರಂದು ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದರೆ ಈ ವೇಳೆ ಅವರು ವಶಕ್ಕೆ ಪಡೆದುಕೊಂಡಿರುವ ಬಿಎಂಡಬ್ಲ್ಯು ಎಸ್‌ಯುವಿ ಕಾರು ಹಾಗೂ ಸಿಕ್ಕಿದೆ ಎಂದು ಹೇಳಲಾಗುತ್ತಿರುವ ಹಣ ನನ್ನದಲ್ಲ ಎಂದು ಹೇಳಿದ್ದಾರೆ. ಜೊತೆಗೆ ಮನೆಯಲ್ಲಿ ಶೋಧ ನಡೆಸಿದ ಅಧಿಕಾರಿಗಳ ಕ್ರಮವು ನನಗೆ ಬೇಸರ ತರಿಸಿದೆ. ಈ ವೇಳೆ ಅಧಿಕಾರಿಗಳು ನನ್ನ ಹಾಗೂ ನನ್ನ ಇಡೀ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂದು ಸಿಎಂ ದೂರಿನಲ್ಲಿ ಆರೋಪಿಸಿದ್ದಾರೆ.