ಮಹಿಳಾ ದಿನಾಚರಣೆ ವೇಳೆಯಲ್ಲೇ ಬರುತ್ತೆ ‘ಹೀಗೊಂದು ದಿನ’..!

ಬೆಂಗಳೂರು: ಈ ವರ್ಷದ ಮಹಿಳಾ ದಿನದಂದೇ ‘ಹೀಗೊಂದು ದಿನ’ ಅಂತಾ ಬರ್ತಿದ್ದಾರೆ ಸ್ವಲ್ಪ ಕಾಲದಿಂದ ಸ್ಯಾಂಡಲ್ ವುಡ್ ನಿಂದ ಮರೆಯಾಗಿದ್ದ ಸಿಂಧು ಲೋಕನಾಥ್. ಹೀಗೊಂದು ದಿನ ಎಂಬ ಹೆಸರಿನ ಈ ಸಿನೆಮಾ ಬಗ್ಗೆ ಪ್ರೇಕ್ಷಕರಲ್ಲೊಂದು ಕುತೂಹಲ ಹುಟ್ಟಿದೆ.

ಮದುವೆಯಾದ ನಂತರ ಸಿನಿಲೋಕದಿಂದ ನಾಪತ್ತೆಯಾದಂತಿದ್ದ ಸಿಂಧು ಲೋಕನಾಥ್ ಪ್ರಧಾನ ಪಾತ್ರದದಲ್ಲಿರುವ ಈ ಚಿತ್ರದ ಕಥೆಯ ಎಳೆ ಹೇಗಿರಬಹುದು ಎಂಬ ಪ್ರಶ್ನೆ ಪ್ರೇಕ್ಷಕರದ್ದು. ಯಾವುದೇ ಚಿತ್ರದ ಪಾಲಿಗಾದರೂ ತಾನೇ ತಾನಾಗಿ ಹುಟ್ಟಿಕೊಳ್ಳುವ ಇಂಥಾ ನಿರೀಕ್ಷೆಯೇ ಗೆಲುವಿನ ಮೊದಲ ಮೆಟ್ಟಿಲು. ಅಂಥಾದ್ದೊಂದು ಮೆಟ್ಟಿಲೇರಿ ನಿಂತಿರುವ ಖುಷಿಯಲ್ಲಿ ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ನೇತೃತ್ವದ ಚಿತ್ರತಂಡ ಮಿಂದೇಳುತ್ತಿದೆ!

‘ಹೀಗೊಂದು ದಿನ’ ಅನ್ ಕಟ್ ಮೂವಿ ಎಂಬ ಕಾರಣದಿಂದಲೇ ಭಾರೀ ಸದ್ದು ಮಾಡುತ್ತಿದೆ. ಅಂದಹಾಗೆ ಅನ್‍ಕಟ್ ಮೆಥಡ್ ನಲ್ಲಿ ಒಂದು ಚಿತ್ರವನ್ನು ರೂಪಿಸೋದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ನಿರ್ದೇಶಕರು ಸೇರಿದಂತೆ ಇಡೀ ಚಿತ್ರತಂಡ ಸಮರ್ಥವಾಗಿ ನಿಭಾಯಿಸಿದ ಖುಷಿಯಲ್ಲಿದೆ. ಇದು ಎರಡು ಘಂಟೆಯಲ್ಲಿ ನಡೆಯೋ ಕಥಾ ಹಂದರ ಹೊಂದಿರೋ ಚಿತ್ರ. ವಿಶೇಷ ಕಾರಣವೊಂದರ ಬೆನ್ನು ಬಿದ್ದು ಮನೆಯಿಂದ ಹೊರ ಬೀಳೋ ಹುಡುಗಿಯ ಸುತ್ತಾ ಎರಡು ಗಂಟೆಗಳ ಕಾಲ ನಡೆಯುವ ವಿದ್ಯಮಾನ ಈ ಚಿತ್ರದ ಮುಖ್ಯ ವಿಚಾರ.

ಇದಕ್ಕಾಗಿ ಪ್ರತಿನಿತ್ಯ ಬೆಳಗ್ಗೆ ಆರರಿಂದ ಎಂಟು ಗಂಟೆವರೆಗೆ ಶೂಟ್ ಮಾಡಿದ್ದರಂತೆ. ಎಲ್ಲಾ ಕಲಾವಿದರು ಹೊಸ ಪ್ರಯೋಗವೆಂಬ ಕಾರಣದಿಂದ ಸಾಥ್ ನೀಡಿದ್ದಾರೆಂಬ ತೃಪ್ತಿ ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಅವರದ್ದು. ಮೊದಲ ಚಿತ್ರದಲ್ಲಿಯೇ ಸವಾಲಿನ ಕಥಾ ಹಂದರವನ್ನು ಕೈಗೆತ್ತಿಕೊಂಡು ಚಿತ್ರವನ್ನು ಮಾಡಿ ಮುಗಿಸಿರುವ ನಿರ್ಮಾಪಕ ಚಂದ್ರಶೇಖರ್ ಸದ್ಯ ಭರ್ಜರಿ ಗೆಲುವೊಂದರ ನಿರೀಕ್ಷೆಯಲ್ಲಿದ್ದಾರೆ.

Comments

Leave a Reply

Your email address will not be published. Required fields are marked *