ರಾಜ್ಯದ ವಿವಿಧೆಡೆ ಮುಂದುವರಿದ ಬೇಸಿಗೆ ಮಳೆ – ಕಾರಿನ ಮೇಲೆ ಮರ ಬಿದ್ದು ತಾಯಿ, ಮಗಳ ಸಾವು

ಬೆಂಗಳೂರು: ಬಿಸಿಲ ಬೇಗೆಯಿಂದ ತತ್ತರಿಸಿದ ರಾಜ್ಯದ ಜನರಿಗೆ ಮಳೆ ತಂಪೆರೆದಿದ್ದರೆ, ಹಲವು ಕಡೆ ಅಪಾರ ನಷ್ಟವನ್ನು ಉಂಟು ಮಾಡಿದೆ.

ಇಂದು ಸಂಜೆ ವೇಳೆಗೆ ರಾಜಧಾನಿ ಬೆಂಗಳೂರು, ಸೇರಿದಂತೆ ಕೋಲಾರ, ಹಾಸನ, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿ ಮಳೆಯಾಗಿದ್ದು, ಅಕಾಲಿಕ ಮಳೆಯಿಂದ ಹಲವೆಡೆ ಜನರು ಸಮಸ್ಯೆ ಎದುರಿಸುವಂತಾಗಿದೆ.

ತಾಯಿ, ಮಗಳು ಸಾವು: ಕಾರಿನ ಮೇಲೆ ಮರ ಮುರಿದು ಬಿದ್ದ ಪರಿಣಾಮ ಕಾರಿನಲ್ಲಿದ್ದ ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಬಂದಿಹಳ್ಳಿಯಲ್ಲಿ ನಡೆದಿದೆ. ತಾಲೂಕಿನ ಕುನಿಗನಹಳ್ಳಿ ಗ್ರಾಮದ ನಿವಾಸಿಗಳಾದ ತಾಯಿ ಚಿನ್ನಮ್ಮ ಹಾಗೂ ಪುತ್ರಿ ಪ್ರಫುಲ್ಲ ಮೃತ ದುರ್ದೈವಿಗಳು. ಭಾರೀ ಮಳೆಯ ಕಾರಣ ಕೊಡ್ಲಿಪೇಟೆ- ಬಾಳ್ಳುಪೇಟೆ ರಸ್ತೆ ಬದಿ ಆಲ್ಟೋ ಕಾರು ನಿಲ್ಲಿಸಿ ರಕ್ಷಣೆ ಪಡೆದಿದ್ದರು. ಈ ವೇಳೆ ಬೃಹತ್ ಮರ ಉರುಳಿಬಿದ್ದ ಪರಿಣಾಮ ಅವಘಡ ಸಂಭವಿಸಿದೆ.

ತಪ್ಪಿದ ಭಾರೀ ಅನಾಹುತ: ಬಿರುಸಿನ ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಹಾರಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಹುಕ್ಕೇರಿ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನತ್ತಬೆಲೆ ಗ್ರಾಮದಲ್ಲಿ ಮರವೊಂದು 10 ಕ್ಕೂ ಹೆಚ್ಚು ಮನೆಯ ಮೇಲೆ ಉರುಳಿಬಿದ್ದು ಅಪಾರ ನಷ್ಟ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭಿಸಿದೆ. ಶಿವಮೊಗ್ಗ ನಗರದಲ್ಲಿ ಮರ ಉರುಳಿ ಬಿದ್ದ ಪರಿಣಾಮ ಎರಡು ಕಾರು ಜಖಂ ಗೊಂಡಿದೆ. ಹಾಸನ ತಾಲ್ಲೂಕಿನ ಕೆರಗಳ್ಳಿ ಗ್ರಾಮದಲ್ಲಿ ಮಳೆಯ ಅರ್ಭಟಕ್ಕೆ 35ಕ್ಕೂ ಹೆಚ್ಚಿನ ತೆಂಗಿನ ಮರಳು ನಾಶವಾಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ಉಳಿದಂತೆ ರಾಜ್ಯದ ಹುಕ್ಕೇರಿ, ಶಿವಮೊಗ್ಗ ನಗರ, ಮೈಸೂರು ನಗರ, ಅರಕಲಗೂಡು, ಪಾವಗಡ, ನೆಲಮಂಗಲ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.

Comments

Leave a Reply

Your email address will not be published. Required fields are marked *