– ಶೇ.70 ಜಲಾವೃತವಾದ ಬೆಳಗಾವಿ ನಗರ
ಬೆಳಗಾವಿ: ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಸುರಿಯುತ್ತಿರುವ ಮಹಾಮಳೆಗೆ ರಾಜ್ಯದ 7 ಜಿಲ್ಲೆಗಳು ಪ್ರವಾಹದ ಪರಿಸ್ಥಿತಿಯನ್ನು ಎದುರಿಸುತ್ತಿವೆ, ಅದರಲ್ಲೂ ಬೆಳಗಾವಿ ನಗರ ಸುಮಾರು ಶೇ. 70 ರಷ್ಟು ಭಾಗ ಪ್ರವಾಹಕ್ಕೆ ಸಿಲುಕಿದೆ. ಜನ ಸಾಮಾನ್ಯ ಮಾತ್ರವಲ್ಲದೇ ಪ್ರವಾಹದ ಬಿಸಿ ಅಲ್ಲಿನ ಶಾಸಕರಿಗೂ ತಟ್ಟಿದೆ.
ಗೋಕಾಕ್‍ನಲ್ಲಿರುವ ಬಾಲಚಂದ್ರ ಜಾರಕಿಹೊಳಿ ಮನೆಗೆ ನೀರು ನುಗ್ಗಿದ್ದರೆ, ಇತ್ತ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಮನೆಯೂ ಜಲಾವೃತವಾಗಿದೆ. ಸುಮಾರು 1 ರಿಂದ 2 ಅಡಿ ನೀರು ನಿಂತಿದೆ. ಇತ್ತ ಜಿಲ್ಲೆಯ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ಹಲವು ಗ್ರಾಮಗಳಲ್ಲಿ ಜನರು ಮನೆಯ ಮೇಲ್ಭಾಗದಲ್ಲಿ ನಿಂತು ಸಹಾಯಕ್ಕೆ ಮನವಿ ಮಾಡುತ್ತಿರುವ ದೃಶ್ಯ ಕಾಣುತ್ತದೆ.

ಬೆಳಗಾವಿಯಲ್ಲಿ ಕಳೆದ ರಾತ್ರಿಯಿಂದ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ನಗರದ ಯಾವುದೇ ಭಾಗದಲ್ಲೂ ನೋಡಿದರು ಕೂಡ ಪ್ರವಾಹದ ನೀರು ಹರಿಯುತ್ತಿರುವ ದೃಶ್ಯ ಕಾಣಸಿಗುತ್ತಿದೆ. ಇಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರವಾಹ ಕಪಿಲೇಶ್ವರ ಕಾಲೋನಿಗೆ ಭೇಟಿ ನೀಡಲಿದ್ದು, ಈ ಭಾಗದ ರಸ್ತೆಯಲ್ಲೂ ಸುಮಾರು 2 ಅಡಿ ನೀರು ನಿಂತಿದೆ. ನೀರಿನ ನಡುವೆಯೇ ಜನರು ಓಡಾಟ ನಡೆಸಿದ್ದಾರೆ. ನಗರದ ಶಿವಾಜಿ ನಗರ, ಶಾಸ್ತ್ರಿನಗರ, ಗುಡ್ ಶೇಟ್ ರೋಡ್, ಸಾಯಿನಗರ, ವೀರಭದ್ರ ನಗರ, ರೇಲ್ವೆ ನಿಲ್ದಾಣದ ಹಿಂಭಾಗ ಸೇರಿದಂತೆ ಬಹುತೇಕ ಪ್ರವಾಹ ನೀರು ಹರಿಯುತ್ತಿದೆ. ವಿದ್ಯುತ್ ಸಂಪರ್ಕ ಇಲ್ಲದಿರುವ ಕಾರಣ ರಾತ್ರಿ ಇಡೀ ಜನರು ಕತ್ತಲಲ್ಲೇ ಸಮಯ ಕಳೆದಿದ್ದಾರೆ.
ಕಳೆದ ಒಂದು ವಾರದಿಂದಲೂ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ಸುಮಾರು 60 ಜನರು ಕಾಣೆಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಬಗ್ಗೆ ಬೆಳಗಾವಿ ಭಾಗದಲ್ಲಿ ಜನರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರವಾಹ ಪರಿಸ್ಥಿತಿ ಎದುರಾಗುತ್ತಿದ್ದರು ಅಧಿಕಾರಿಗಳು ಮಾತ್ರ ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಂಡಿಲ್ಲ. ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆ ಹಾಗೂ ಪರಿಹಾರ ಕ್ರಮ ನಡೆಸಲು ಬೋಟ್ ಸಹ ಇನ್ನು ಲಭ್ಯವಾಗಿಲ್ಲ ಎಂಬ ಮಾಹಿತಿ ಲಭಿಸಿದೆ.

Leave a Reply