ಮಂಡ್ಯ ಜಿಲ್ಲೆಯಲ್ಲಿ ಕಳೆದ ರಾತ್ರಿ ಭಾರೀ ಮಳೆ – ಮನೆಗಳು ಕುಸಿತ

ಮಂಡ್ಯ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವ ಹಿನ್ನೆಲೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕಳೆದ ರಾತ್ರಿ ಮಳೆ ಸುರಿದ ಕಾರಣ ಪಾಂಡವಪುರ ಹಾಗೂ ಕೆಆರ್‍ಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳು ಕುಸಿದಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಇದರಿಂದ ರೈತರು ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ಇಡೀ ಗ್ರಾಮ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಮನೆಗಳಿಗೆ ನೀರು ನುಗ್ಗಿರುವ ಕಾರಣ 8 ಮನೆಗಳು ಕುಸಿದಿವೆ. ರಾತ್ರಿಯೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ನೀರಿನಲ್ಲಿ ಸಿಲುಕಿದವರ ರಕ್ಷಣೆ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಅವರ ತಂದೆ ಮಾಡಿದ ಕೆಲಸ ಮರೆತಿದ್ದಾರೆ: ರಾಜೂಗೌಡ

ನಿನ್ನೆ ಸಂಜೆ 4 ಗಂಟೆಯಿಂದ ಇಂದು ಮುಂಜಾನೆಯವರೆಗೂ ಪಾಂಡವಪುರ ಹಾಗೂ ಕೆಆರ್‍ಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಮಳೆ ಸುರಿದಿದೆ. ಲಿಂಗಾರಪುರ ಗ್ರಾಮದ ಪಕ್ಕದ ಹಳ್ಳದ ನೀರು ಉಕ್ಕಿ ಹರಿದ ಕಾರಣ ಗ್ರಾಮಕ್ಕೆ ನೀರು ನುಗ್ಗಿದೆ. ಹೀಗಾಗಿ ರಾತ್ರಿ ಪೂರ್ತಿ ಇಲ್ಲಿನ ಜನರು ಜಾಗರಣೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮದ ಬಹುತೇಕ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.

ದಿನಸಿ ಸೇರಿದಂತೆ ಅಗತ್ಯ ವಸ್ತುಗಳು ಸಂಪೂರ್ಣ ನಾಶವಾಗಿದ್ದು, ಒಟ್ಟು 8 ಮನೆಗಳ ಗೋಡೆ ಕುಸಿದು ಲಕ್ಷಾಂತರ ನಷ್ಟವಾಗಿದೆ. ಮನೆಗೆ ನೀರು ತುಂಬಿಕೊಳ್ಳುತ್ತಿದ್ದಂತೆ ಜನರು ಹೊರ ಬಂದಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಮನೆ ಕಳೆದುಕೊಂಡವರು ಸಂಬಂಧಿಕರ ಮನೆಗಳಿಗೆ ಆಟೋ, ಗೂಡ್ಸ್ ವಾಹನದಲ್ಲಿ ಅಳಿದುಳಿದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ನಾವು ಜೆಡಿಎಸ್‍ನಿಂದ ಪರಿಷತ್‍ಗೆ ಸ್ಪರ್ಧೆ ಮಾಡಲ್ಲ: ಜಿಟಿ ದೇವೇಗೌಡ

ಮಧ್ಯರಾತ್ರಿಯೇ ಗ್ರಾಮಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು ಅವರು ಭೇಟಿ ನೀಡಿದ್ದು, ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ತುರ್ತು ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *